ಬೆಂಗಳೂರು: ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಉಡುಪಿ ಮೂಲದ 21 ವರ್ಷದ ಸೌರವ್ ಶೆಟ್ಟಿ ಬಂಧಿತ ಆರೋಪಿ. ಕೇಂದ್ರದ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋದಿಂದ ಸೈಬರ್ ಟಿಪ್ಲೈನ್ ವರದಿಯ ಮೂಲಕ ಕರ್ನಾಟಕ ಮೂಲದ ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ದೃಶ್ಯಾವಳಿಗಳನ್ನು ಆನ್ ಲೈನ್ ನಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳು ಮತ್ತು ಸಂದೇಶವಾಹಕ ವೇದಿಕೆಗಳ ಮೂಲಕ ಹಂಚಿಕೆ ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ರಾಜ್ಯದ ನೋಡಲ್ ಅಧಿಕಾರಿಯೊಬ್ಬರು ಸಂಗ್ರಹಿಸಿದ್ದರು.
ಈ ಮಾಹಿತಿ ಅನ್ವಯ ಸಿಐಡಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇದೇ ತಿಂಗಳ ಜು.7 ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಸೌರವ್ ಶೆಟ್ಟಿ ಇನ್ಸ್ಟಾಗ್ರಾಮ್ ಮೂಲಕ ಅಶ್ಲೀಲ ವಿಡಿಯೋ ಲಿಂಕ್ ರವಾನಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಆರೋಪಿ ಆನ್ಲೈನ್ ಸ್ಟೋರೆಜ್ನಲ್ಲಿಯೂ ಅಶ್ಲೀಲ ವಿಡಿಯೋಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಈಗ ಆರೋಪಿಯೂ ಈ ಕೃತ್ಯಕ್ಕೆ ಬಳಸುತ್ತಿದ್ದ ಡಿಜಿಟಲ್ ಉಪಕರಣಗಳು ಮತ್ತು ಕ್ಲೌಡ್ ಖಾತೆಯನ್ನು ಸೈಬರ್ ಕ್ರೈಂ ಪೊಲೀಸರು ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.
Follow us on Social media