Breaking News

ಕೋವಿಡ್-19 ನಿಂದ ರಾಜ್ಯದ ಅಭಿವೃದ್ಧಿ ವೇಗಕ್ಕೆ ಕಂಟಕವಾಗಿರುವ ನೋವು ನನಗಿದೆ: ಸಿಎಂ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಕೋವಿಡ್ 19 ಸೋಂಕಿನಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆಯಾಗಿದ್ದು, ಕೋವಿಡ್ ಸಂಕಷ್ಟ ಬರದೇ ಇದ್ದಿದ್ದರೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದಿತ್ತು. ಪ್ರಗತಿಯಲ್ಲಿ ಹಿನ್ನೆಡೆ ಕಂಡ ನೋವು ನನಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸರ್ಕಾರದ ಒಂದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋವಿಡ್-19 ಅಭಿವೃದ್ಧಿ ಕೆಲಸಕ್ಕೆ ಕಂಟಕವಾಗಿರುವ ಬಗ್ಗೆ ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ಕೋವಿಡ್ ಸಾಂಕ್ರಾಮಿಕ ಇಲ್ಲದಿದ್ದರೆ ಅತಿ ವೇಗದ ಅಭಿವೃದ್ಧಿ ಸಾಧಿಸಬಹುದಿತ್ತು. ಈಗಿನ ಪರಿಸ್ಥಿತಿಯಲ್ಲಿ ಲಾಕ್ಡೌನ್ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಇನ್ನು ಮುಂದೆ ಲಾಕ್ ಡೌನ್ ಬಗ್ಗೆ ಚಿಂತೆ ಮಾಡದೇ ಕೋವಿಡ್ ಜೊತೆ ಜೀವನ ನಡೆಸುವ, ಸಂಪನ್ಮೂಲ ಕ್ರೋಢೀಕರಿಸುವ ಬಗ್ಗೆ ಗಮನಹರಿಸಬೇಕು. ಅಭಿವೃದ್ಧಿ ಸಾಧಿಸುವ ನಿಟ್ಟಿಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. 

ನನಗೆ ರಾಜ್ಯದ ಜನರ ಋಣ ತೀರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಆಗಬೇಕಾಗಿದ್ದು ಬಹಳಷ್ಟಿದ್ದು, ಈ ನಾಡಿನ ಜನ, ರೈತ, ಕೃಷಿ ಕಾರ್ಮಿಕ, ದೀನದಲಿತರು, ಬಡವರ ಏಳಿಗೆಗೆ ಪ್ರಯತ್ನಿಸೋಣ. ಆರ್ಥಿಕ ಸೋರಿಕೆಗೆ ಕಡಿವಾಣ ಹಾಕಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸೋಣ. ಉಳಿದ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನಮ್ಮ ಗುರಿಯಾಗಿದೆ. ಅದಕ್ಕೆ ನಾನು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಬರಗಾಲದ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದೆ. ಆದರೆ ಕೆಲವೇ ದಿನಗಳಲ್ಲಿ ಉತ್ತಮ ಮಳೆ ಜತೆಗೆ ಅತಿವೃಷ್ಟಿಯಿಂದ ಅಪಾರ ಹಾನಿಯಾಯಿತು. ಅದು ನನಗೆ ಅಗ್ನಿಪರೀಕ್ಷೆ ಯಾಗಿತ್ತು. ಆಗ ನಾನು ಒಬ್ಬನೇ ಇದ್ದೆ. ಸಂಪುಟ ಸಚಿವರು ಇರಲಿಲ್ಲ. ಒಬ್ಬಂಟಿಯಾಗಿ ಪ್ರವಾಸ ಮಾಡಿ ಜನರ ಸಂಕಷ್ಟ ಆಲಿಸಿ ಅವರ ಕಷ್ಟ ನೀಗಿಸಲು ಯತ್ನಿಸಿದೆ ಎಂದು ಸ್ಮರಿಸಿಕೊಂಡರು. 

ನನ್ನ ಆಡಳಿತಾವಧಿಯಲ್ಲಿ ರೈತ, ಆತನ ಕುಟುಂಬ ನೆಮ್ಮದಿಯಿಂದ ಬದುಕಬೇಕು ಎಂಬುದು ನಮ್ಮ ಆಶಯ. ಪರಿಶಿಷ್ಟ ಪಂಗಡದ ಮನೆಗೆ ಹೋಗಿ ಅವರ ಸಂಕಷ್ಟ ನೀಗಿಸುವ ಕೆಲಸ ಮಾಡಿದೆವು. ಅವರು ನೆಮ್ಮದಿಯಿಂದ ಜೀವನ ನಡೆಸಬೇಕು. ಮೂರು ವರ್ಷದಲ್ಲಿ ಯಾವುದೇ ಬಡವನಿಗೆ ಮನೆ ಇಲ್ಲ ಎಂದು ಹೇಳಬಾರದು. ಅದಕ್ಕಾಗಿ ಎಲ್ಲಾ ಯತ್ನ ಮಾಡುತ್ತೇವೆ. ನಾಡಿನ ಎಲ್ಲ ಜನಾಂಗದ ಅಭಿವೃದ್ಧಿ ನಮ್ಮ ಗುರಿ ಎಂದು ವಿವರಿಸಿದರು.

ಎಪಿಎಂಸಿ ಕಾಯ್ದೆಗೆ ಅನೇಕ ಟೀಕೆ ಟಿಪ್ಪಣಿ ಬಂದರೂ, ಜಾರಿಗೆ ತಂದಿದ್ದೇವೆ. ಇದರಿಂದ ರೈತ ಎಲ್ಲಿ ಬೇಕಾದರು ತನ್ನ ಬೆಳೆಯನ್ನು ಮಾರಾಟ ಮಾಡಬಹುದಾಗಿದೆ. ಅದೇ ರೀತಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮೂಲಕ ಬರುವ ದಿನಗಳಲ್ಲಿ ಕೈಗಾರಿಕೆಗೆ ಉತ್ತೇಜನ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಪ್ರತಿಪಕ್ಷಗಳು ಅನಗತ್ಯ ಟೀಕೆ ಮಾಡದೇ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿದ್ದು, ಇಲ್ಲಿನ ಅಭಿವೃದ್ಧಿ ಗೆ ಹೆಚ್ಚಿನ ಒತ್ತುನೀಡುತ್ತಿದ್ದೇವೆ. ನೀವೆ ಅಚ್ಚರಿ ಪಡುವ ರೀತಿ ಮೂರು ವರ್ಷದಲ್ಲಿ ಬೆಂಗಳೂರನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಯತ್ನಿಸುತ್ತೇವೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಆಗಿಲ್ಲ ಎಂಬ ಅಸಮಾಧಾನ ಇದೆ. ಅದಕ್ಕಾಗಿ ಡಾ. ಡಿ.ಎಂ. ನಂಜುಂಡಪ್ಪ ವರದಿಯನ್ವಯ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಕೆಲಸ ಆದ್ಯತೆ ನೀಡಲಾಗುತ್ತಿದೆ ಎಂದರು.
 
ದ್ವೇಷ ರಾಜಕಾರಣ ಮಾಡಿಲ್ಲ
ನಾನು ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ.ಟೀಕೆ ಮಡುವವರನ್ನು ಗೌರವದಿಂದ ಕಾಣುತ್ತೇನೆ. ರಾಜ್ಯ ಅಭಿವೃದ್ಧಿ ಪಥದಲ್ಲಿ ಹೋಗಬೇಕು ಎಂಬುದೊಂದೇ ನನ್ನ ಉದ್ದೇಶ. ಹಿಂದೂ ಮುಸ್ಲಿಂ, ಕ್ರೈಸ್ತ ಎಂಬ ಬೇಧ ಭಾವ ಮಾಡಿಲ್ಲ. ಯಾವುದೇ ಕೋಮು ಗಲಭೆಗೆ ಅವಕಾಶ ನೀಡಿಲ್ಲ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.

ಇದಕ್ಕೂ ಮುನ್ನ ಯಡಿಯೂರಪ್ಪ ಒಂದು ವರ್ಷದ ಸಾಧನೆಯ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಸವಾಲುಗಳ ಒಂದು ವರ್ಷ ಪರಿಹಾರದ ಸ್ಪರ್ಶ ಎಂಬ ಕಿರು ಹೊತ್ತಿಗೆ, ಪುಟ ಕಿಟ್ಟ ಚಿನ್ನ ಕಿರು ಹೊತ್ತಿಗೆ, ಜನಪದ ಕೃತಿ, ಮಾರ್ಚ್ ಆಫ್ ಕರ್ನಾಟಕ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೂ ವರ್ಚುವಲ್ ವೇದಿಕೆ ಮೂಲಕ ಸಾಧನೆಯ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಸರ್ಕಾರದ ಸಾಧನೆಯ ಐದು ನಿಮಿಷಗಳ ಸಾಕ್ಷ್ಯಚಿತ್ರ ಪ್ರಸಾರ ಮಾಡಲಾಯಿತು. ಏಕಕಾಲದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಈ ಸಮಾರಂಭದ ನೇರ ಪ್ರಸಾರ ಕಂಡಿತು. 

ಫಲಾನುಭವಿಗಳ ಜೊತೆ ನೇರ ಸಂವಾದ: ಇದೇ ವೇಳೆ 10 ಮಂದಿ ಫಲಾನುಭವಿಗಳೊಂದಿಗೆ ಸಿಎಂ ನೇರ ಸಂವಾದ ನಡೆಸಿದರು. ಕೋವಿಡ್ ಸಂತ್ರಸ್ತರು, ಪ್ರವಾಹ ಸಂತ್ರಸ್ತರು, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಪ್ಪಳ ಜಿಲ್ಲೆಗಳ ಸಂತ್ರಸ್ತರ ಜೊತೆ ಸಂವಾದ ನಡೆಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×