Breaking News

ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೇ ಪೌರ ಕಾರ್ಮಿಕರ ಅನಿರ್ಧಿಷ್ಟಾವಧಿ ಪ್ರತಿಭಟನೆ

ಬೆಂಗಳೂರು: ಪೌರಕಾರ್ಮಿಕರ ಆರೋಗ್ಯ ಕಾಪಾಡಲು ಹಾಗೂ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ನೀತಿ–ನಿಯಮಗಳನ್ನು ಪಾಲನೆ ಮಾುತ್ತಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಪೌರಕಾರ್ಮಿಕರು ನಗರದಲ್ಲಿ ಅನಿರ್ಧಿಷ್ಠಾವದಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಸಂದರ್ಭದಲ್ಲೂ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಕಾರ್ಮಿಕರಿಗೆ ನಿತ್ಯವೂ ಹೊಸ ಸುರಕ್ಷಾ ಕವಚ (ಪಿಪಿಇ ಕಿಟ್), ಮಾಸ್ಕ್‌ ನೀಡಬೇಕು. ಸರಕುಗಳನ್ನು ಸ್ವಚ್ಛಗೊಳಿಸಲು ಕ್ರಿಮಿನಾಶಕ ಒದಗಿಸಬೇಕು. ಕುಡಿಯುವ ನೀರು, ಆಹಾರ, ಬಟ್ಟೆ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಸಾರಿಗೆ ಭತ್ಯೆಯೆಂದು ದಿನಕ್ಕೆ 100ರೂ ನೀಡಬೇಕು. ಇದಲ್ಲದೆ ಒಂದು ತಿಂಗಳ ವೇತನವನ್ನು ಆಪತ್ತು ಭತ್ಯೆಯೆಂದು ನೀಡಬೇಕು. ಹಾಜರಾತಿ ಮುನ್ನ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಆರೋಗ್ಯ ತಪಾಸಣೆ ಮಾಡಬೇಕು. ಘನತ್ಯಾಜ್ಯ ನಿರ್ವಹಣೆ ಕಾರ್ಮಿಕರಿಗೂ ನೇರ ಪಾವತಿ ವೇತನ ಒದಗಿಸಬೇಕು. ನಿವೃತ್ತಿ ಪಡೆಯುವ ಕಾರ್ಮಿಕರಿಗೆ 3 ತಿಂಗಳ ಮುಂಚಿತವಾಗಿ ನೋಟಿಸ್ ನೀಡಿ, ಅವರಿಗೆ ನೀಡಬೇಕಾದ ಪಿಂಚಣಿ ಕೊಡಬೇಕು. ಅನುಕಂಪ ನೇಮಕಾತಿ ಪ್ರಕ್ರಿಯೆಯನ್ನೂ ಮುಗಿಸಬೇಕು  ಎಂದು ಆಗ್ರಹಿಸಿ ಇದೇ ಮಂಗಳವಾರದಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸಿದ್ದಾರೆ. 

ತಾವು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದು, ತಮ್ಮ ತಮ್ಮ ಕ್ಷೇತ್ರದ ಪಾಲಿಕೆ ಕೇಂದ್ರಗಳಲ್ಲಿ ಬೆಳಗ್ಗೆ 6.30ರಿಂದ 11.30ರ ಸಂದರ್ಭದಲ್ಲಿ 2 ಬಾರಿ ಪ್ರತಿಭಟನೆ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಅವರು, ಈಗಾಗಲೇ ಶೇ.50ರಷ್ಡು ಪೌರ ಕಾರ್ಮಿಕರು ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಐದು ಮಂದಿ ಸಾವನ್ನಪ್ಪಿದ್ದಾರೆ. ಈ ವರೆಗೂ ಪೌರ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವ ವ್ಯವಸ್ಥೆ ಕಲ್ಪಿಸಿಲ್ಲ. ಸೋಂಕಿಗೆ ತುತ್ತಾದ ಕಾರ್ಮಿಕರಿಗೆ ಪ್ರತ್ಯೇಕ ಸಾಂಸ್ಛಿಕ ಕ್ವಾರಂಟೈನ್ ಗೂ ವ್ಯವಸ್ಥೆ ಇಲ್ಲ. ಈ ಹಿಂದೆ ಹೇಳಿದಂತೆ ಪಾಲಿಕೆ ಪೌರ ಕಾರ್ಮಿಕರನ್ನು ರ್ಯಾಂಡಮ್ ಟೆಸ್ಟ್ ಕೂಡ ಆರಂಭಿಸಿಲ್ಲ. ಪಿಪಿಇ ಕಿಟ್ ಗಳನ್ನು ನೀಡುವುದಾಗಿ ಹೇಳಿದ್ದ ಪಾಲಿಕೆ ಈವರೆಗೂ ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಗ್ಲೌಸ್ ಗಳು ಮತ್ತು ಮಾಸ್ಕ್ ಗಳನ್ನು ನೀಡಿ ಕೈತೊಳೆದುಕೊಂಡಿದೆ. ಅದೂ ಕೂಡ ಕೊರೋನಾ ಸೋಂಕು ಆರಂಭವಾದ ಬಳಿಕ ಕೇವಲ 4 ಬಾರಿ ಮಾತ್ರ, ಕಾರ್ಮಿಕರೇ ತಮ್ಮ ಸ್ವಂತ ಹಣದಲ್ಲಿ ಗ್ಲೌಸ್ ಗಳನ್ನು ಮತ್ತು ಮಾಸ್ಕ್ ಗಳನ್ನು ಧರಿಸುತ್ತಿದ್ದಾರೆ. ಕನಿಷ್ಠ ಪಕ್ಷ ಪೌರ ಕಾರ್ಮಿಕರಿಗೆ ಬಟ್ಟೆ ಬದಲಿಸಲು ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯದ ವ್ಯವಸ್ಥೆ ಕೂಡ ಇಲ್ಲ. ಕಾರ್ಮಿಕರಿಗೆ ನೀಡುತ್ತಿರುವ ಬೆಳಗಿನ ಉಪಾಹಾರ ಗುಣಮಟ್ಟದ್ದಲ್ಲ. ಹಲವು ಬಾರಿ ಅದರಲ್ಲಿ ಹುಳುಗಳು ಇರುವ ಕುರಿತು ಹಲವು ಕಾರ್ಮಿಕರು ದೂರು ನೀಡಿದ್ದಾರೆ.  

ಇನ್ನು ಕಸ ತೆಗೆದುಕೊಂಡು ಹೋಗುವ ವಾಹನಗಳ ಚಾಲಕರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಘೋಷಣೆ ಮಾಡಲಾಗಿರುವ ಹೆಚ್ಚುವರಿ ಧನವನ್ನು ಕಳೆದ ಮೂರು ತಿಂಗಳಿನಿಂದ ನೀಡಿಲ್ಲ. ಕೋವಿಡ್ ಮುಂಜಾಗ್ರತಾ ಪರಿಕರಗಳೂ ಕೂಡ ಕಾರ್ಮಿಕರನ್ನು ತಲುಪಿಲ್ಲ. ಹೀಗಾಗಿ ನಿತ್ಯವೂ ಕಾರ್ಮಿಕರು ಸೋಂಕು ಭಯದಲ್ಲೇ ಕರ್ತವ್ಯ ನಿರ್ವಹಿಸಬೇಕಿದೆ ಎಂದು ನಿರ್ಮಲಾ ಆವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ರಣದೀಪ್ ಡಿ ಅವರು, ಸಮಸ್ಯೆ ಇದೆ. ಶೀಘ್ರದಲ್ಲೇ ಅದನ್ನು ಪರಿಹರಿಸಲಿದ್ದೇವೆ. ಪೌರ ಕಾರ್ಮಿಕರ ಸ್ಕ್ರೀನಿಂಗ್ ಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಬಯೋ ಮೆಡಿಕಲ್ ವೆಸ್ಟೇಜ್ ನಿರ್ವಹಣೆಗಾಗಿ ಪ್ರತ್ಯೇಕ ಕಾಂಟ್ರಾಕ್ಟರ್ ಗಳನ್ನು ನೇಮಿಸಲಾಗಿದೆ. ಇವರ ಮೂಲಕವೇ ಪೌರ ಕಾರ್ಮಿಕರಿಗೆ ಕೋವಿಡ್ ಮುಂಜಾಗ್ರತಾ ಪರಿಕರಗಳು ವಿತರಿಸಲಾಗುತ್ತದೆ. ಕಂಟೈನ್ ಮೆಂಟ್ ಝೋನ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಸಮಸ್ಯೆ ಅಲಿಸಲು ಸಹಾಯವಾಣಿ ತೆರೆಯುತ್ತೇವೆ ಎಂದು ಹೇಳಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×