ಬೆಂಗಳೂರು: ಕೋವಿಡ್-19 ಉಪಕರಣ, ಸಾಮಗ್ರಿಗಳು, ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ, ಅವ್ಯವಹಾರಗಳು ನಡೆದಿದ್ದರೆ ಕೂಡಲೇ ರಾಜೀನಾಮೆ ನೀಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ.
ವಿಕಾಸ ಸೌಧದಲ್ಲಿಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಜೊತೆ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕಾಶ ಭೂಮಿಗೆ ಎಷ್ಟು ದೂರ ಅಂತರ ಇದೆಯೋ ಅಷ್ಟೇ ಅಂತರದ ಸುಳ್ಳನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಒಂದು ವೇಳೆ ಅವ್ಯವಹಾರ ನಡೆಸಿರುವುದನ್ನು ಸಾಬೀತು ಮಾಡಿದರೆ ಒಂದು ಕ್ಷಣವು ಸಚಿವ ಸ್ಥಾನದಲ್ಲಿ ಮುಂದುವರೆಯುವುದಿಲ್ಲ. ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಬಿ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ವೆಂಟಿಲೇಟರ್ ತಾಂತ್ರಿಕ ಅಂಶಗಳ ಆಧಾರದ ಮೇಲೆ ಖರೀದಿ ಮಾಡಬೇಕಾಗುತ್ತದೆ. ಸುಮಾರು 4 ಲಕ್ಷ ರೂ ಮೌಲ್ಯದ ವೆಂಟಿಲೇಟರ್ ಗಳಿಂದ 50-60 ಲಕ್ಷ ರೂ.ಮೌಲ್ಯದ ವೆಂಟಿಲೇಟರ್ಗಳನ್ನು ಖರೀದಿ ಮಾಡಲಾಗಿದೆ. ಬರೀ ನಾಲ್ಕು ಲಕ್ಷದ ಬೆಲೆ ಆಧಾರದ ಮೇಲೆ ಮಾತ್ರ ವೆಂಟಿಲೇಟರ್ ಖರೀದಿ ಮಾಡಿಲ್ಲ. ಹಾಗೆಯೇ ಕೇವಲ ಐಸಿಯುನಲ್ಲಿ ಬಳಕೆಯಾಗುವ ವೆಂಟಿಲೇಟರ್‌ಗೆ 18 ಲಕ್ಷ ರೂ. ವೆಚ್ಚ ತಗುಲಿದೆ. ಉಪಯೋಗಗಳನ್ನು ಆಧರಿಸಿ ವೆಂಟಿಲೇಟರ್ ಗಳ ಬೆಲೆ ನಿರ್ಧಾರ ವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ವೆಂಟಿಲೇಟರ್ ಖರೀದಿಯಲ್ಲಿ 120 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಇದುವರೆಗೆ ಕೇವಲ 10.61 ಕೋಟಿ ರೂ. ಮೌಲ್ಯದ ವೆಂಟಿಲೇಟರ್ ಖರೀದಿಯಾಗಿವೆ. ಪಿಪಿಇ ಕಿಟ್ಗಳಿಗೆ 48.65 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ಪಿಪಿಇ ಕಿಟ್‌ನಲ್ಲೂ ಕೆಲವೊಂದು ಪ್ರತ್ಯೇಕ ಉಪಕರಣಗಳಿರುತ್ತವೆ ಎಂದು ಸ್ಪಷ್ಟನೆ ನೀಡಿದರು.
ಇಡೀ ದೇಶದಲ್ಲಿಯೇ ಕೊರೋನಾ ಸೋಂಕಿಗೆ ಮೊದಲ ಬಲಿಯಾಗಿದ್ದು ಕಲ್ಬುರ್ಗಿಯಲ್ಲಿ. ತಾವು ಎರಡು ದಿನ ಅಲ್ಲಿಯೇ ವಾಸ್ತವ್ಯ ಹೂಡಿ ವೈದ್ಯರಿಗೆ ಧೈರ್ಯ ತುಂಬಿದೆ. ಕೇವಲ 4 ಕಾಂಪೋನೆಂಟ್ ಇರುವ ಕಿಟ್ ಖರೀದಿಸಿದರೆ ಚಿಕಿತ್ಸೆ ಸಾಧ್ಯವಿಲ್ಲ ಎಂದು ವೈದ್ಯರೇ ಹೇಳಿದ್ದರು. ಬಳಿಕ 6 ಕಾಂಪೋನೆಂಟ್ ಇರುವ ಕಿಟ್ ಬೇಕು ಎಂದರು. ಅದನ್ನು ತಯಾರಿಸಲು ಸಂಸ್ಥೆಗಳ ಹುಡುಕಾಟದಲ್ಲಿದ್ದೆವು. 1 ಲಕ್ಷ ಕಿಟ್ ತಯಾರು ಮಾಡಲು ವಿವಿಧ ಕಂಪನಿಗಳಿಗೆ ಆದೇಶ ನೀಡಲಾಗಿದೆ. ಈವರೆಗೂ ಅದು 40,165 ಸಾವಿರ ಕಿಟ್ ಮಾತ್ರ ತಯಾರಕರು ಸರ್ಕಾರಕ್ಕೆ ನೀಡಿದ್ದಾರೆ ಎಂದು ಅವರು ವಿವರಿಸಿದರು.
ಕೋವಿಡ್ ನಿಯಂತ್ರಿಸಲು ಸರ್ಕಾರ ಮತ್ತು ಅಧಿಕಾರಿಗಳು ಕಷ್ಟಪಟ್ಟು ಎಲ್ಲವನ್ನೂ ನಿಭಾಯಿಸುತ್ತಿದ್ದೇವೆ. ಬಳಿಕ ವೈದ್ಯರು 6 ಕಾಂಪೋನೆಂಟ್‌ನಿಂದ 10 ಕಾಂಪೋನೆಂಟ್ ಇರುವ ಕಿಟ್ ಗೆ ಬೇಡಿಕೆ ಇರಿಸಿದರು. ರಾಜ್ಯದಲ್ಲಿ ಮತ್ತು ದೇಶದಲ್ಲಿ ಈ ರೀತಿಯ ಕಿಟ್ ಗಳು ಲಭ್ಯವಿಲ್ಲದ ಕಾರಣ ಚೀನಾ, ಸಿಂಗಾಪುರ್ ದೇಶದಿಂದ ಕಿಟ್ ಗಳನ್ನು ಖರೀದಿ ಮಾಡಿದ್ದೇವೆ. 3 ಕಂಪನಿಯಿಂದ 10 ಲಕ್ಷ ಕಿಟ್ ಖರೀದಿ ಮಾಡಿದ್ದೇವೆ. ಆರಂಭದಲ್ಲಿ ಕಿಟ್ ಗಳ ಬೆಲೆ ಬೇರೆಯದೇ ಇತ್ತು. ಪ್ರಸ್ತುತ ದರಗಳು ಬೇರೆಯ ರೀತಿಯದ್ದಾಗಿವೆ. ಈವರೆಗೂ 9 ಲಕ್ಷದ 65 ಸಾವಿರ ಕಿಟ್ ಗಳನ್ನು ಸರ್ಕಾರ ಖರೀದಿ ಮಾಡಿದೆ ಎಂದು ಅವರು ತಿಳಿಸಿದರು.
ಪಿಪಿಇ ಕಿಟ್‌ಗೆ ಇದುವರೆಗೆ 79,35,16,816 ರೂ. ಖರ್ಚಾಗಿದೆ. ಇದರಲ್ಲಿ 150 ಕೋಟಿ ರೂ.ಅವ್ಯವ ಹಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ. ಎಲ್ಲಿ ,ಹೇಗೆ ,ಎಷ್ಟು ಅವ್ಯವಹಾರ? ನಡೆದಿದೆ ಎಂದು ಸಿದ್ದರಾಮಯ್ಯಗೆ ಸಚಿವ ರಾಮುಲು ಮರು ಪ್ರಶ್ನೆ ಹಾಕಿದರು.
ಪ್ರತಿ ಎನ್-95 ಮಾಸ್ಕ್ ನ್ನು 156 ರೂಪಾಯಿ ಕೊಟ್ಟು ಖರೀದಿಸಲಾಗಿದೆ. ಬೇರೆ ಬೇರೆ ಸಂಸ್ಥೆಗಳಿಂದ ಎನ್-95 ಮಾಸ್ಕ್ ಖರೀದಿಗೆ ಇದುವರೆಗೆ ಒಟ್ಟು 11,51,58,226 ರೂ ವೆಚ್ಚ ಮಾಡಲಾಗಿದೆ. ಸರ್ಜಿಕಲ್ ಗ್ಲಾಸ್‌ಗೆ ಕೇರಳದ ಕಂಪನಿಯು 8.10 ರೂ ನೀಡುವುದಾಗಿ ತಿಳಿಸಿದ್ದು, ಆದರೆ ಪೂರೈಕೆ ಮಾಡಲಿಲ್ಲ. ಬಳಿಕ ಬೆಂಗಳೂರಿನ ಫಾರ್ಮಾಸೂಟಿಕಲ್ ಕಂಪನಿಯೊಂದಕ್ಕೆ ಪೂರೈಕೆಗೆ ಆದೇಶ ನೀಡಿದ್ದೇವೆ. ಪ್ರತಿ ಗ್ಲೌಸ್ ಗೆ 9.50 ಖರೀದಿಸಲು 3 ಲಕ್ಷ ಗ್ಲೌಸ್ ಗೆ ಆದೇಶ ನೀಡಿದ್ದೇವೆ. 50 ಸಾವಿರ ಗ್ಲೌಸ್ ಇದುವರೆಗೆ ಸರಬರಾಜು ಮಾಡಿದ್ದಾರೆ. ಸರ್ಜಿಕಲ್ ಗ್ಲೌಸ್ ಈವರೆಗೂ 30 ಸಾವಿರ ತೆಗೆದುಕೊಂಡಿದ್ದೇವೆ. 28.50 ಲಕ್ಷರೂ ಸರ್ಜಿಕಲ್ ಗ್ಲೌಸ್ ಖರೀದಿ ಮಾಡಿದ್ದೇವೆ ಎಂದರು.
ಹ್ಯಾಂಡ್ ಸ್ಯಾನಿಟೈಸರ್ ಖರೀದಿಯು ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಾಡಲಾಗಿದೆ. 500 ಎಂಎಲ್ ಬಾಟೆಲ್ ನಂತೆ 25 ಸಾವಿರ ಲೀಟರ್‌ಗೆ ಖರೀದಿ ಆದೇಶ ಮಾಡಿದ್ದೇವೆ. ಒಟ್ಟು 62.50 ಲಕ್ಷ ರೂ ಮೌಲ್ಯದ ಸ್ಯಾನಿ ಟೈಸರ್ ಖರೀದಿಸಲಾಗಿದೆ. ಅಂತೆಯೇ ಬೇರೆ ಬೇರೆ ಕಂಪನಿಗಳೊಂದಿಗೆ 2.65 ಕೋಟಿ ರೂ.ಮೊತ್ತದಲ್ಲಿ ಖರೀದಿಸಿದ್ದೇವೆ. ಕೋವಿಡ್-19 ಸೋಂಕು ನಮಗೆ ದೊಡ್ಡ ಸವಾಲಾಗಿದೆ. ಸೋಂಕನ್ನು ನಿಯಂತ್ರಿಸಲು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿರುವುದಾಗಿ ಅವರು ಸಮರ್ಥಿಸಿಕೊಂಡರು.
ಇದೇ ವೇಳೆ ಮಾತನಾಡಿದ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಇಲಾಖೆಯು ಔಷಧ ಮತ್ತು ಉಪಕರಣಗಳನ್ನು ಖರೀದಿಸಿದೆ. ಕೊರೋನಾ ಸೋಂಕು ಕಾಣಿಸಿಕೊಂಡ ಮಾರ್ಚ್ ತಿಂಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸಿದೆವು. ಎಲ್ಲಾ ಔಷಧಿ,ರಕ್ಷಣಾ ಸಾಮಗ್ರಿಗಳು ಹಾಗೂ ಉಪಕರಣಗಳು ಸೇರಿ 290 ಕೋಟಿರೂ ಖರೀದಿ ಮಾಡಲಾಗಿದೆ. ಮಾರ್ಚ್ ನಲ್ಲಿ ಪಿಪಿಇ ಕಿಟ್ ಗಳು ಲಭ್ಯತೆ ಇರಲಿಲ್ಲ. ಸ್ಯಾನಿಟೈಸರ್ ಬೆಲೆ 20 ಸಾವಿರ ಲೀಟರ್ ಗೆ ಪೂರೈಕೆಗೆ ಮನವಿ ಮಾಡಿತ್ತು. ಸ್ಯಾನಿಟೈಸರ್ ಗೆ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು 500 ಎಂಎಲ್ ಗೆ 250 ರೂ ನೀಡಿ ಸರ್ಕಾರ ಖರೀದಿಸಿತು. ಆದರೂ ಮಾರ್ಚ್ ನಲ್ಲಿ ರಾಜ್ಯಕ್ಕೆ ಸ್ಯಾನಿಟೈಸರ್ ಗಳು ಸರಿಯಾಗಿ ಪೂರೈಕೆ ಆಗಲಿಲ್ಲ ಎಂದರು.
ಟೆಸ್ಟಿಂಗ್ ಕಿಟ್ ಗಳನ್ನು ಪರೀಶೀಲನೆಗೆ ಕಳುಹಿಸಿದಾಗ ಅವುಗಳು ಸೂಕ್ತವಲ್ಲವೆಂದು ಮಾಹಿತಿ ಬಂತು. ಆಗ 25 ಸಾವಿರಕ್ಕೆ ಖರೀದಿ ಆದೇಶ ನೀಡಿದ್ದೆವು. ಆದರೆ ಖರೀದಿಸದೆ ವಾಪಸ್ ಕಳುಹಿಸಲಾಗಿದೆ ಎಂದು ಖರೀದಿ ಕ್ರಮಗಳನ್ನು ಅವರು ಸಮರ್ಥಿಸಿಕೊಂಡರು.
ಖಾಸಗಿ ಕಂಪನಿಯಿಂದ 5.6 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಲಾಗಿದೆ. ಮೂರು ರೀತಿಯ ವೆಂಟಿಲೇಟರ್ ಗಳನ್ನು ಖರೀದಿ ಮಾಡಲಾಗಿದೆ. 2100 ವೆಂಟಿಲೇಟರ್ ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಅದರಲ್ಲಿ ಇದುವರೆಗೆ 740 ಮಾತ್ರ ಪೂರೈಕೆಯಾಗಿವೆ ಎಂದು ಜಾವೇದ್ ಅಕ್ತರ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ವಿಪಕ್ಷಗಳ ಆರೋಪಗಳಿಗೆ ಸರ್ಕಾರ ಸ್ಪಷ್ಟವಾಗಿ ಉತ್ತರ ಕೊಡುತ್ತೇವೆ. ಯಾವುದನ್ನು ಮರೆಮಾಚುತ್ತಿಲ್ಲ. ರಾಜ್ಯದ ಜನರು ಜನ ಬೀದಿಯಲ್ಲಿ ಮಾತಾಡುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಈ ಬಗ್ಗೆ ಉತ್ತರ ನೀಡುತ್ತಿದ್ದೇವೆ. ಪ್ರತಿಪಕ್ಷದ ನಾಯಕರು ಆರೋಗ್ಯ ಇಲಾಖೆಯ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆದರೆ ಅವರ ಆರೋಪ ಬಹಳ ದೂರ ಇದೆ ಇದಕ್ಕೆ ಸ್ಪಷ್ಟನೆ ನೀಡಲು ಇಂದು ಸಚಿವ ಶ್ರೀರಾಮುಲು,ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಿಮ್ಮ ಮುಂದೆ ಬಂದಿದ್ದೇವೆ ಎಂದು ತಿಳಿಸಿದರು.
Follow us on Social media