ಕುಂದಾಪುರ: ಸತತ ಯತ್ನದಿಂದ ಬರೋಬ್ಬರಿ ಮೂರುವರೆ ತಿಂಗಳ ನಂತರ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ವ್ಯಕ್ತಿಯ ಮೃತ ದೇಹವು ಇಂದು (ಜು.18) ಬ್ರಹ್ಮಾವರದ ಹಾರಾಡಿಗೆ ತಲುಪಲಿದೆ ಎಂದು ಹೇಳಲಾಗಿದೆ.
ಫ್ರಾನ್ಸಿಸ್ ಪೌಲ್ ಡಿ’ಅಲ್ಮೇಡಾ (54) ಅವರು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಬಿಲ್ಡಿಂಗ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮಾರ್ಚ್ 28ರಂದು ವಾಹನ ಚಲಾಯಿಸಿಕೊಂಡು ಹೋಗುವಾಗ ಹೃದಯಾಘಾತಕ್ಕೆ ಒಳಗಾಗಿದ್ದು ಜೆಡ್ಡಾದ ಕಿಂಗ್ ಫಹಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಮೃತರ ಮಡದಿ ಸುನಿತಾ ಡಿ’ಅಲ್ಮೇಡಾ ಮತ್ತು ಮಕ್ಕಳು ದುಃಖದಲ್ಲೇ ಕಳೆದ ಮೂರುವರೆ ತಿಂಗಳಿಂದ ಗಂಡನ ಮೃತದೇಹದ ನಿರೀಕ್ಷೆಯಲ್ಲಿ ಕಾಲ ಕಳೆದಿದ್ದಾರೆ. ಮೃತ ಶರೀರ ಭಾರತಕ್ಕೆ ರವಾನಿಸಲು ಬೇಕಾದ ದಾಖಲಾತಿಗಳನ್ನು ಪಡೆದು ಅಲ್ಲಿಯ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಜುಲೈ 8ಕ್ಕೆ ಭಾರತಕ್ಕೆ ಸಾಗಿಸಲು ಟಿಕೆಟ್ ಕಾದಿರಿಸಿದ್ದರೂ ಕೊನೇ ಕ್ಷಣದಲ್ಲಿ ಕೊವಿಡ್ ಟೆಸ್ಟ್ ಸೀಲ್ ಹಾಕದ ಕಾರಣ ಶವ ಪೆಟ್ಟಿಗೆಯನ್ನು ವಿಮಾನದಲ್ಲಿ ಸಾಗಿಸಲು ಒಪ್ಪದೆ ಇರುವುದಿಂದ ಇದೀಗ ಈ ಎಲ್ಲಾ ಪ್ರಕ್ರಿಯೆ ಮುಗಿದು ನಾಳೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೃತದೇಹ ಪಡೆಯಲು ಮಗ ಸ್ಟ್ಯಾಲಿನ್ ಡಿ’ಅಲ್ಮೇಡ ಹಾಗೂ ಸಂಬಂಧಿ ಎಡ್ವರ್ಡ್ ಸುನಿಲ್ ಲೋಬೋ ಬೆಂಗಳೂರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಲಾಕ್ಡೌನ್ ಇದ್ದು ಜಿಲ್ಲೆಯ ಗಡಿ ಮುಚ್ಚಿರುವುದರಿಂದ ಶವ ತರಲು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಅವರು ಉಡುಪಿ ಜಿಲ್ಲಾಧಿಕಾರಿಯವರ ಅಂಗೀಕೃತ ಪಾಸ್ ಒದಗಿಸಿದ್ದಾರೆ. ಜು.18ರಂದು ಬೆಳಿಗ್ಗೆ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಮೃತ ದೇಹ ಹೊರಡಲಿದ್ದು ಸಂಜೆ ಬ್ರಹ್ಮಾವರ ತಲುಪುವ ಸಂಭವವಿದೆ ಎಂದು ಹೇಳಲಾಗುತ್ತಿದ್ದು ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಶವ ಸಂಸ್ಕಾರವನ್ನು ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.