ಜೈಪುರ: ಕಾಂಗ್ರೆಸ್ ನಿಂದ ಉಚ್ಛಾಟಿತಗೊಂಡಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ 2019ರಿಂದಲೇ ಸರ್ಕಾರವನ್ನು ಉರುಳಿಸಲು ಬಿಜೆಪಿ ಜೊತೆ ಸೇರಿ ಪ್ರಯತ್ನಪಡುತ್ತಿದ್ದರು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತೊಮ್ಮೆ ಆರೋಪ ಮಾಡಿದ್ದಾರೆ.
ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ಕಳೆದ ಒಂದೂವರೆ ವರ್ಷದಿಂದ ನಾನು ಮತ್ತು ಸಚಿನ್ ಪೈಲಟ್ ಮಾತನಾಡಿಯೇ ಇಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ದುರದೃಷ್ಟಕರ ಎಂದಿರುವ ಗೆಹ್ಲೊಟ್, ನಿಮ್ಮ ವಿರೋಧ ಪಕ್ಷದವರ ಜೊತೆ ಸೇರಿಕೊಂಡು ರಾಜಕೀಯ ಮಾಡುವುದಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇನಿದೆ, ಅದರ ಮೌಲ್ಯ ಏನು ಉಳಿದಿದೆ, ಮಹತ್ವಾಕಾಂಕ್ಷೆ ಹೊಂದಿರುವುದು ತಪ್ಪಲ್ಲ, ಆದರೆ ತಪ್ಪು, ಪಿತೂರಿ ಕೆಲಸ ಮಾಡುವುದು ಸರಿಯಾದ ನಡೆಯಲ್ಲ ಎಂದು ಸಚಿನ್ ಪೈಲಟ್ ಅವರನ್ನುದ್ದೇಶಿಸಿ ಹೇಳಿದ್ದಾರೆ.
ರಾಜ್ಯ ವಿಧಾನಸಭೆಯಿಂದ ತಮ್ಮ ಮತ್ತು ತಮ್ಮ ನಿಕಟವರ್ತಿ ಶಾಸಕರ ಅನರ್ಹತೆ ಪ್ರಶ್ನಿಸಿ ಸಚಿನ್ ಪೈಲಟ್ ಹೈಕೋರ್ಟ್ ಮೊರೆ ಹೋಗಿದ್ದು ಇದರಿಂದ ಪಕ್ಷ ಮತ್ತು ಸರ್ಕಾರದ ರಾಜಕೀಯ ಇದೀಗ ಕಾನೂನು ತಿರುವು ಪಡೆದುಕೊಂಡಿದೆ.
ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಕಾಂಗ್ರೆಸ್ ಶಾಸಕರ ವಿರುದ್ಧ ಅನರ್ಹತೆ ನೊಟೀಸ್ ನ್ನು ಕಾಂಗ್ರೆಸ್ ಮೊನ್ನೆ ನ್ಯಾಯಾಧೀಶ ಸತೀಶ್ ಚಂದ್ರ ಶರ್ಮ ಮೂಲಕ ಸ್ಪೀಕರ್ ಕಚೇರಿಯಿಂದ ಕಳುಹಿಸಲಾಗಿದೆ.
2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ತಮಗೆ ಮುಖ್ಯಮಂತ್ರಿ ಸ್ಥಾನ ನೀಡದೆ ಅಶೋಕ್ ಗೆಹ್ಲೊಟ್ ಅವರಿಗೆ ಹೈಕಮಾಂಡ್ ಮಣೆ ಹಾಕಿದಾಗಲೇ ಸಚಿನ್ ಪೈಲಟ್ ತೀವ್ರ ಅಸಮಾಧಾನಗೊಂಡಿದ್ದರು.
200 ಸದಸ್ಯ ಬಲದ ರಾಜಸ್ತಾನ ವಿಧಾನಸಭೆಯಲ್ಲಿ 107 ಕಾಂಗ್ರೆಸ್ ಶಾಸಕರು ಮತ್ತು ಬಿಜೆಪಿಯ 72 ಶಾಸಕರಿದ್ದಾರೆ.
Follow us on Social media