ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇದೇ 20 ರಿಂದ ಚಂದನ ವಾಹಿನಿಯಲ್ಲಿ ಇ- ತರಗತಿ ಪ್ರಾರಂಭಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ದೂರದರ್ಶನದ ಚಂದನವಾಹಿನಿಯಲ್ಲಿ ಇದೇ 20ರಿಂದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇ -ತರಗತಿಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಮಾಜಿ ಶಿಕ್ಷಣ ಸಚಿವರೊಂದಿಗೆ ವೀಡಿಯೋ ಸಂವಾದ ನಡೆಸಿ ಸುರೇಶ್ ಕುಮಾರ್ ಈ ವಿಷಯ ತಿಳಿಸಿದರು. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಹಾಗೂ ಡಿಎಸ್ ಇ ಆರ್ ಟಿ ನೆರವಿನೊಂದಿಗೆ ಇ-ತರಗತಿಗಳನ್ನು ನಡೆಸಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ಇದೇ 20ರಂದು ಬೆಳಗ್ಗೆ 9.30ರಿಂದ 2 ಗಂಟೆಗಳ ಕಾಲ ಹಾಗೂ ಮಧ್ಯಾಹ್ನ 3ಗಂಟೆಯಿಂದ 2 ಗಂಟೆಗಳ ಕಾಲ ಒಟ್ಟು 4 ಗಂಟೆಗಳ ಅವಧಿಯ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ಅವರು ಹೇಳಿದ್ದಾರೆ.
‘ಇಂದು ಒಂದು ಅತ್ಯಂತ ವಿಶಿಷ್ಟವಾದ, ಅಪರೂಪವಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ರಾಜ್ಯದಲ್ಲಿ ಇದುವರೆವಿಗೆ #ಶಿಕ್ಷಣ_ಸಚಿವರಾಗಿ ಕಾರ್ಯ ನಿರ್ವಹಿಸಿರುವ ಶ್ರೀ ಎಚ್ ವಿಶ್ವನಾಥ್, ಪ್ರೊ.ಬಿ.ಕೆ. ಚಂದ್ರಶೇಖರ್, ಶ್ರೀ ಬಸವರಾಜ ಹೊರಟ್ಟಿ, ವಿಧಾನಸಭೆಯ ಸಭಾಧ್ಯಕ್ಷರಾಗಿರುವ ಶ್ರೀ ವಿಶ್ವೇಶ್ವರ ಹೆಗಡೆ, ಶ್ರೀ ಕಿಮ್ಮನೆ ರತ್ನಾಕರ್, ಶ್ರೀ ತನ್ವೀರ್ ಸೇಠ್ ಹಾಗೂ ಶ್ರೀ ಮಹೇಶ್ ರವರ ಜೊತೆ ನಡೆದ ಶಿಕ್ಷಣ ಕ್ಷೇತ್ರ ಇಂದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು #ವಿಡಿಯೋ_ಕಾನ್ಫರೆನ್ಸ್ ಮೂಲಕ ಸುಮಾರು ಎರಡು ಗಂಟೆಗಳ ಅವಧಿಯ ಸಂವಾದ ನಡೆಯಿತು. ಎಲ್ಲರೂ ತಮ್ಮ ಅನುಭವದ ಹಿನ್ನೆಲೆಯಲ್ಲಿ ಅತ್ಯಂತ ಮೌಲ್ಯಯುತವಾದ ಅಭಿಪ್ರಾಯಗಳನ್ನು ನೀಡಿದರು.
ತಂತ್ರಜ್ಞಾನವು ತರಗತಿ ಕಲಿಕೆಗೆ ಪರ್ಯಾಯವಲ್ಲವೆಂಬ ಅಂಶವನ್ನು ಎಲ್ಲರೂ ಪ್ರತಿಪಾದಿಸಿದರು. ಆದರೆ ಇಂತಹ ಅನಿವಾರ್ಯ ಸಂದರ್ಭದಲ್ಲಿ ಅದರ ಸದ್ಬಳಕೆಯು ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಶಿಕ್ಷಣವನ್ನು ದೊರಕಿಸಿಕೊಡಲು, ಮಕ್ಕಳ ಕ್ರಿಯಾಶೀಲತೆಯನ್ನು ಉತ್ತೇಜನಗೊಳಿಸಲು ಒಂದು ಸದವಕಾಶವಾಗಬೇಕು, ಸರ್ಕಾರ ತನ್ನ ಜವಾಬ್ದಾರಿಯನ್ನು ಈ ನಿಟ್ಟಿನಲ್ಲಿ ನಿರ್ವಹಿಸಬೇಕೆಂಬ ಅಭಿಪ್ರಾಯ ಸಂವಾದದಲ್ಲಿ ಮೂಡಿತು. ಜೊತೆಯಲ್ಲಿ ಶಿಕ್ಷಣ ತಜ್ಞರಾದ ಗುರುರಾಜ ಕರ್ಜಗಿ, ನಿರಂಜನಾರಾಧ್ಯ ಹಾಗೂ ಹೃಷಿಕೇಶ್ ರವರೂ ಪಾಲ್ಗೊಂಡಿದ್ದರು. ಸರ್ಕಾರವು ಈ ಎಲ್ಲ ಸಲಹೆಗಳನ್ನು ತನ್ನ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಮುಕ್ತವಾಗಿ ಅವಲೋಕಿಸುತ್ತದೆ. ಎಲ್ಲರಿಗೂ ನನ್ನ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸಬಯಸುತ್ತೇನೆ’ ಎಂದು ಸುರೇಶ್ ಕುಮಾರ್ ಹೇಳಿದರು.
Follow us on Social media