ಬಳ್ಳಾರಿ: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಶೇಕಡಾ 50ರಷ್ಟು ಹಾಸಿಗೆಗಳನ್ನು ಮೀಸಲಿಡಲು ಸೂಚನೆ ನೀಡಲಾಗಿದೆ. ಆದರೆ, ಕೆಲವು ಖಾಸಗಿ ಆಸ್ಪತ್ರೆಗಳು ಇದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಖಾಸಗಿ ಆಸ್ಪತ್ರೆಗಳು ಶೇಕಡಾ 50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿರಿಸಬೇಕು. ಹಲವು ಖಾಸಗಿ ಆಸ್ಪತ್ರೆಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ. ಆದರೆ ಕೆಲವು ಖಾಸಗಿ ಆಸ್ಪತ್ರೆಗಳು ಇದನ್ನು ಪಾಲಿಸುತ್ತಿಲ್ಲ. ಹೀಗಾಗಿ, ಅಂತಹ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಅವುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2 ಲಕ್ಷಕ್ಕೂ ಅಧಿಕ ಆ್ಯಂಟಿಜೆನ್ ಕಿಟ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಈಗಾಗಲೇ 1 ಲಕ್ಷ ಕಿಟ್‌ಗಳನ್ನು ಖರೀದಿಸಲಾಗಿದೆ. ಕೋವಿಡ್ ಟೆಸ್ಟ್ ರಿಪೋರ್ಟ್ ಬರಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗೆ 2-3 ಪರೀಕ್ಷೆಯ ಪ್ರಯೋಗಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ಇದರಿಂದ ಶೀಘ್ರ ಪರೀಕ್ಷಾ ಫಲಿತಾಂಶ ಬರಲು ಸಹಕಾರಿಯಾಗಲಿದೆ ಎಂದರು.
Follow us on Social media