ಸೂರತ್: ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದ ಗುಜರಾತ್ ಸಚಿವರ ಮಗನನ್ನು ಬಂಧಿಸಿದ್ದ ಗುಜರಾತ್ ಮಹಿಳಾ ಪೊಲೀಸ್ ಕೆಲಸಕ್ಕೇ ರಾಜೀನಾಮೆ ನೀಡಿದ್ದಾರೆ.
ಸ್ವತಃ ಮಹಿಳಾ ಪೊಲೀಸ್ ಪೇದೆ ತಾವು ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು. ಆದರೆ ಹಿರಿಯ ಅಧಿಕಾರಿಯೊಬ್ಬರು ಆಕೆ ರಾಜೀನಾಮೆ ನೀಡಿರುವ ಸುದ್ದಿಯನ್ನು ಅಲ್ಲಗಳೆದಿದ್ದಾರೆ.
ಗುಜರಾತ್ ನ ಆರೋಗ್ಯ ಸಚಿವ ಅವರ ಪುತ್ರ ಪ್ರಕಾಶ್ ಕನಾನಿ ಹಾಗೂ ಅವರ ಇಬ್ಬರು ಸ್ನೇಹಿತರನ್ನು ಮಹಿಳಾ ಪೊಲೀಸ್ ಪೇದೆ ಸುನಿತಾ ಯಾದವ್ ಲಾಕ್ ಡೌನ್ ಉಲ್ಲಂಘಿಸಿದ್ದಕ್ಕಾಗಿ ಸೂರತ್ ನಲ್ಲಿ ಬಂಧಿಸಿದ್ದರು.
ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಸಚಿವರ ಮಗನನ್ನು ಬಂಧಿಸಿದ್ದ ಸುನಿತಾ ಯಾದವ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಇದಾದ ಕೆಲವೇ ದಿನಗಳಲ್ಲಿ ಆಕೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ, ಆದರೆ ನನ್ನ ಹಿರಿಯ ಅಧಿಕಾರಿಗಳಿಂದ ನನಗೆ ಬೆಂಬಲ ಸಿಗಲಿಲ್ಲ. ಈ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುನಿತಾ ಯಾದವ್ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಸುನಿತಾ ಯಾದವ್ ರಾಜೀನಾಮೆ ನೀಡಿಲ್ಲ. ಈ ಹಂತದಲ್ಲಿ ಆಕೆ ರಾಜೀನಾಮೆ ನೀಡುವುದು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಸೂರತ್ ಪೊಲೀಸ್ ಆಯುಕ್ತರಾದ ಆರ್ ಬಿ ಬ್ರಹ್ಮಭಟ್ ಹೇಳಿದ್ದಾರೆ.
Follow us on Social media