ಬೆಂಗಳೂರು: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ರಾಷ್ಟ್ರಗಳು ಲಾಕ್’ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡ ಪರಿಣಾಮ ರಷ್ಯಾದ ಮಾಸ್ಕೋದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯ 209 ವಿದ್ಯಾರ್ಥಿಗಳು ಕೊರೋನೆಗೂ ಮಂಗಳವಾರ ತಾಯ್ನಾಡಿಗೆ ಬಂದಿಳಿದಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.
ನಿನ್ನೆ ಬೆಳಗಿನ ಜಾವ 4.15ರ ಸುಮಾರಿಗೆ ವಿದ್ಯಾರ್ಥಿಗಳು ತಮ್ಮ ಸ್ವಂತ ಹಣದಲ್ಲಿ ಚಾರ್ಟೆಡ್ ವಿಮಾನ ಬುಕ್ ಮಾಡಿಕೊಳ್ಳುವ ಮೂಲಕ ಬೆಂಗಳೂರು ನಗರಕ್ಕೆ ಬಂದಿಳಿದಿದ್ದಾರೆ. ಇದೀಗ ವಿದ್ಯಾರ್ಥಿಗಳೆಲ್ಲರನ್ನೂ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಜೂನ್.30ರಂದು ಬೆಂಗಳೂರಿಗೆ ವಿಮಾನ ಬರಲಿತ್ತು. ಆದರೆ, ದೆಹಲಿಗೆ ಹೋಗಬೇಕಿದ್ದ ಸಾಕಷ್ಟು ಮಂದಿ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಮಾಸ್ಕೋದಲ್ಲಿ 400 ಮಂದಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು, ಭಾರತೀಯ ರಾಯಭಾರಿ ಕಚೇರಿಯಿಂದ ನಮಗೆ ಯಾವುದೇ ರೀತಿಯ ಮಾಹಿತಿಗಳು ಬರುತ್ತಿಲ್ಲ. ಹಿಂದಿ ಗೊತ್ತಿಲ್ಲದ ಕಾರಣ ನಮ್ಮನ್ನು ಕಡೆಗಣನೆಯಿಂದ ನೋಡಲಾಗುತ್ತಿತ್ತು ಎಂದು ವಿದ್ಯಾರ್ಥಿನಿ ರಕ್ಷಿತಾ ಉಮೇಶ್ ಹೇಳಿದ್ದಾರೆ.
ರಾಯಭಾರಿ ಕಚೇರಿಯಿಂದ ಯಾವುದೇ ಸಹಾಯಗಳಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಲವು ವಿಡಿಯೋಗಳನ್ನು ಮಾಡಿ ಟ್ವಿಟರ್ ನಲ್ಲಿ ಹರಿಬಿಟ್ಟಿದ್ದರು. ಇದನ್ನು ಗಮಿನಿಸಿದ ಸಂಸದ ಜಿಸಿ ಚಂದ್ರಶೇಖರ್ ಅವರು ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿದ್ದರು. ಸಂಸದರಿಂದ ಕೂಡಲೇ ಸ್ಪಂದನೆ ಬಂದಿತ್ತು. ಸಂಸದರು ರಾಯಭಾರಿ ಕಚೇರಿಗೆ ಪತ್ರ ಬರೆದು, ಮನವಿ ಮಾಡಿಕೊಂಡಿದ್ದರು.
ಜು.13 ರಂದು ನಮಗೆ ವಿಮಾನ ದೊರಕಿತ್ತು. ನಮ್ಮೊಂದಿಗೆ ತಮಿಳುನಾಡು, ಕೇರಳ ಹಾಗೂ ತೆಲಂಗಾಣ ರಾಜ್ಯಗಳ ಇತರೆ ವಿದ್ಯಾರ್ಥಿಗಳೂ ಕೂಡ ಪ್ರಯಾಣಿಸಿದ್ದರು ಎಂದು ರಕ್ಷಿತಾ ತಿಳಿಸಿದ್ದಾರೆ.
Follow us on Social media