ಉಡುಪಿ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ವಾಹನ ಕಳವು ಮಾಡಿ, ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ತಂಡದ ನಾಲ್ವರನ್ನು ಕಾಪು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಟಿಪ್ಪು ನಗರದ ಸಯ್ಯದ್ ಮಜರ್ ಪಾಷಾ(೨೩), ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಹೊನ್ನೆಕುಡಿ ಪಿ.ಕೆ.ಇಲಿಯಾಸ್ ಯಾನೆ ಬಾಬು(೫೮), ಶಿವಮೊಗ್ಗ ಟಿಪ್ಪು ನಗರ ಸಯ್ಯದ್ ಮೆಹಬೂಬ್ ಪಾಷಾ(೫೭), ತಮಿಳುನಾಡಿನ ಮೆಟ್ಟುಪಾಳ್ಯಮ್‌ನ ಜಿಯಾವುಲ್ ಹಕ್(೩೭) ಬಂಧಿತರು. ಆರೋಪಿಗಳಿಂದ ೨೩.೭೫ ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾರ್ಕಳ ಉಪ ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕ ಕೆ.ಕೃಷ್ಣಕಾಂತ್ ಕಾಪು ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ ಬೊಲೆರೋ ಹಾಗೂ ಕಾಪು ಠಾಣೆ ವ್ಯಾಪ್ತಿಯ ಕಟಪಾಡಿ ಕಲ್ಲಾಪು ಬಳಿ ನಿಲ್ಲಿಸಿದ್ದ ಪಿಕ್‌ಅಪ್ ವಾಹನ ಕಳವು ಪ್ರಕರಣ ಸಂಬಂಧಿಸಿ ಕಾಪು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡ ವಿವಿಧ ಜಿಲ್ಲೆ ಮತ್ತು ಹೊರರಾಜ್ಯಗಳಿಗೆ ತೆರಳಿ ವಾಹನ ಕಳವು ಸಂಬಂಧಿಸಿ ಮಾಹಿತಿ ಕಲೆ ಹಾಕಿತ್ತು. ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ವಾಹನ ಕಳವು ಮಾಡಿದ್ದ ತಂಡವೊಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಜುಲೈ ೨೦ರಂದು ಕಟಪಾಡಿ ಚೆಕ್‌ಪೋಸ್ಟ್‌ನಲ್ಲಿ ಬೆಳಗ್ಗೆ ಉಡುಪಿ ಕಡೆಯಿಂದ ಬರುತ್ತಿದ್ದ ಇಂಡಿಕಾ ಕಾರಿನಲ್ಲಿದ್ದ ನಾಲ್ವರನ್ನು ತಡೆದು ಪರಿಶೀಲಿಸಿದಾಗ ಅವರಲ್ಲಿ ಕಾರಿನ ದಾಖಲಾತಿ ಇಲ್ಲದಿರುವುದು ಪತ್ತೆಯಾಗಿದೆ. ಮತ್ತಷ್ಟು ವಿಚಾರಣೆ ನಡೆಸಿದಾಗ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಪಿಕ್‌ಅಪ್ ವಾಹನ ಕಳವು ಮಾಡಲು ಬಂದಿರುವುದಾಗಿ ಬಾಯಿಬಿಟ್ಟಿದ್ದರು. ಈ ಹಿಂದೆ ಶ್ರೀಗಂಧ ಕಳ್ಳತನ ಪ್ರಕರಣದಲ್ಲೂ ಆರೋಪಿಗಳು ಶಾಮೀಲಾಗಿದ್ದರು. ಅದರಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.