ಮಂಗಳೂರು : ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದು ಪರಾರಿಯಾದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸ್ಕೂಟರ್ ಸವಾರ ಉಳ್ಳಾಲ ಬಂಡಿಕೊಟ್ಯ ನಿವಾಸಿ ಸುಬೇದ್ (28) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೇತ್ರಾವತಿ ಸೇತುವೆಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಘಟನೆಯಲ್ಲಿ ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಅಪಘಾತಕ್ಕೆ ಕಾರಣರಾದ ಕಾರು ಸವಾರ ಸೋಮೇಶ್ವರ ಪುರಸಭೆ ವ್ಯವಸ್ಥಾಪಕ ಕೃಷ್ಣ ಹಾಗೂ ಲಾರಿ ಸವಾರ ಕಾರ್ಕಳದ ಸುರೇಂದ್ರ ಎಂಬಾತನನ್ನು ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಹಸವಾರ ಚೆಂಬುಗುಡ್ಡೆ ಮಹಮ್ಮದ್ ಶಾಕೀರ್ (18) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುಬೇದ್ ಹಾಗೂ ಮಹಮ್ಮದ್ ಶಾಕೀರ್ ಆಕ್ಟಿವಾ ಸ್ಕೂಟರಿನಲ್ಲಿ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಚಲಿಸುತ್ತಿದ್ದ ಸಂದರ್ಭ ಹಿಂಬದಿಯಿಂದ ಕೃಷ್ಣ ಚಲಾಯಿಸುತ್ತಿದ್ದ ಐ20 ವಾಹನ ಸ್ಕೂಟರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಈ ವೇಳೆ ರಸ್ತೆಗೆ ಸ್ಕೂಟರ್ ಉರುಳಿದಾಗ ಹಿಂಬದಿಯಿಂದ ಕೇರಳ ಕಡೆಗೆ ಸಿಮೆಂಟ್ ಸಾಗಾಟ ನಡೆಸುತ್ತಿದ್ದ ಲಾರಿ ಸುಬೇದ್ ಮೇಲೆಯೇ ಚಲಿಸಿದೆ. ಪರಿಣಾಮ ಸುಬೇದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಕಾರಣವಾದ ಸೋಮೇಶ್ವರ ಪುರಸಭೆ ವ್ಯವಸ್ಥಾಪಕ ನ ಮೇಲೆ ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿದ್ದು, ಆತನನ್ನು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಾಗುರಿ ಸಂಚಾರಿ ಠಾಣಾ ಪೊಲೀಸರು ಅಡ್ಡಗಟ್ಟಿ ಬಂಧಿಸಿದ್ದಾರೆ. ಮೃತ ಸುಬೇದ್ ಜು. 23 ರಂದು ವಿವಾಹ ನಿಶ್ಚಯವಾಗಿತ್ತು ಎನ್ನಲಾಗಿದೆ. ಪ್ರಕರಣ ಸಂಬಂಧ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Follow us on Social media