ಮಂಗಳೂರು: ಸಿದ್ದಾರ್ಥ್ ಅವರ ಮೃತದೇಹವನ್ನು ಹೊಗೆಬಜಾರ್ ಸಮುದ್ರ ಕಿನಾರೆಯಲ್ಲಿ ಪತ್ತೆ ಹಚ್ಚಿದ ಯುವಕ ಯಾರು ಗೊತ್ತೇ? ಅವರ ಹೆಸರು ರಿತೇಶ್.
ಬೆಳಿಗ್ಗೆ ಮೀನು ಹಿಡಿಯಲು ತಂಡದೊಂದಿಗೆ ನದಿಗೆ ಇಳಿದಿದ್ದ ರಿತೇಶ್ ಅವರಿಗೆ ಒಂದು ಮೃತದೇಹ ತೇಲುತ್ತಿರುವುದು ದೂರದಿಂದಲೇ ಕಂಡಿದೆ. ಅದು ಸಿದ್ಧಾರ್ಥ್ ಮೃತದೇಹವೇ ಇರಬಹುದು ಎಂದು ಭಾವಿಸಿ ದಡಕ್ಕೆ ತಂದಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಧಾವಿಸಿ ಅವರೇ ಸಿದ್ಧಾರ್ಥ್ ಎಂಬುದನ್ನು ದೃಢಪಡಿಸಿದ್ದಾರೆ.
ನದಿಗೆ ಜಿಗಿಯುವಾಗ ಸಿದ್ಧಾರ್ಥ್ ಅವರು ಶರ್ಟ್ ತೆಗೆದಿದ್ದು, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಶೂ ಧರಿಸಿದ್ದರು. ರಿತೇಶ್ ಅವರು ದೇಹವನ್ನು ದಡಕ್ಕೆ ತಂದಾಗ ಸಿದ್ದಾರ್ಥ್ ಜೇಬಿನಲ್ಲಿ ಅವರ ಮೊಬೈಲ್ ಸಿಕ್ಕಿದೆ. ವಾಚ್, ಉಂಗುರ ಹಾಗೂ ಶೂ ಎಲ್ಲವೂ ಸಿದ್ದಾರ್ಥ್ ಮೈಮೇಲೆಯೇ ಇತ್ತು. ದೇಹ ಇನ್ನೊಂದು ಕಿಲೋಮೀಟರ್ ದೂರ ಸಾಗಿಬಿಟ್ಟಿದ್ದರೂ ಅರಬ್ಬಿ ಸಮುದ್ರ ಸೇರಿಬಿಡುತ್ತಿತ್ತು. ಆನಂತರ ದೇಹ ಸಿಗಲು ಸಾಧ್ಯವೇ ಇರಲಿಲ್ಲ. ಸದ್ಯ ನಮಗೆ ಇಲ್ಲಿಯೇ ಸಿಕ್ಕಿದ್ದು ಸ್ವಲ್ಪ ಸಮಾಧಾನ ತಂದಿದೆ ಎನ್ನುತ್ತಾರೆ ರಿತೇಶ್.
ಮರಳಿನ ರಾಶಿಯಲ್ಲಿ ಅನಾಥವಾಗಿ ಬಿದ್ದುಕೊಂಡ ಅವರ ಊದಿಕೊಂಡ ದೇಹವನ್ನು ನೋಡಿದರೆ, ಇವರೇನಾ ೫೦ ಸಾವಿರ ಜನರಿಗೆ ಉದ್ಯೋಗ ನೀಡಿ ಅಷ್ಟೂ ಕುಟುಂಬಗಳಿಗೆ ದಾರಿದೀಪವಾಗಿದ್ದವರು ಎನಿಸುತ್ತದೆ. ಮನುಷ್ಯನ ಜೀವನ ಇಷ್ಟೇ ಎಂದು ಮನಸ್ಸಿನಲ್ಲಿ ಮರುಕ ಉಂಟಾಗುತ್ತದೆ ಎನ್ನುತ್ತಾರೆ ರಿತೇಶ್.