ಲಂಡನ್: ಭಾರತಕ್ಕೆ ಬೇಕಾಗಿರುವ, ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಹಗರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿ ನ್ಯಾಯಾಂಗ ಬಂಧನ ಅವಧಿಯನ್ನು ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ಆಗಸ್ಟ್ 6ರ ವರೆಗೆ ವಿಸ್ತರಿಸಿದೆ.
ಪ್ರಸ್ತುತ ಜೈಲಿನಲ್ಲಿರುವ 48 ವರ್ಷದ ನೀರವ್ ಮೋದಿಯ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಆರೋಪಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಮ್ಮಾ ಅರ್ಬುತ್‌ನೋಟ್ ಅವರು, ನ್ಯಾಯಾಂಗ ಬಂಧನ ಅವಧಿಯನ್ನು ಆಗಸ್ಟ್ 6ರ ವರೆಗೆ ವಿಸ್ತರಿಸಿದರು.
ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಸೆಪ್ಟೆಂಬರ್ ನಲ್ಲಿ ಎರಡನೇ ಹಂತದ ವಿಚಾರಣೆ ನಡೆಯಲಿದೆ.
ಕಳೆದ ತಿಂಗಳು, ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮೊದಲ ಹಂತದ ಹಸ್ತಾಂತರ ವಿಚಾರಣೆ ನಡೆದಿದ್ದು, ಕೊರೊನಾವೈರಸ್ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ವಿಚಾರಣೆ ಮುಂದೂಡಲಾಗಿದೆ. ಎರಡನೇ ಹಂತದ ವಿಚಾರಣೆ ಸೆಪ್ಟೆಂಬರ್ 7ರಿಂದ ಐದು ದಿನಗಳ ನಡೆಯಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಅವರನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.
Follow us on Social media