ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಮೂಲಕ ನಾವು ತಪ್ಪು ಮಾಡಿದೆವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿದ್ದರಾಮಯ್ಯ, “ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಚುನಾವಣಾಪೂರ್ವ ಮೈತ್ರಿ ಬೇಡ ಎಂದು ನಾನೂ ಹೇಳಿದ್ದೆ. ಇದರಿಂದ ನಿರೀಕ್ಷಿಸಿದ ಹಾಗೆ ಮತ ಧ್ರುವೀಕರಣ ಆಗುವುದಿಲ್ಲ ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಮೈತ್ರಿ ಮಾಡಿಕೊಳ್ಳದೆ ಇದ್ದಿದ್ದರೆ ಕನಿಷ್ಠ 7-8 ಸ್ಥಾನಗಳನ್ನು ಗೆಲ್ಲುತ್ತಿದ್ದೆವು” ಎಂದು ಹೇಳುವ
ಮೂಲಕ ಮತ್ತೊಮ್ಮೆ ಜೆಡಿಎಸ್ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಎದುರಿಸಿತ್ತು. ಆದರೆ, ಜೆಡಿಎಸ್ ಎಲ್ಲಾ ಕ್ಷೇತ್ರದಲ್ಲೂ ಸೋಲನುಭವಿಸಿದರೆ, ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಸಫಲವಾಗಿತ್ತು. ಈ ಸೋಲಿನ ನಂತರ ರಾಜ್ಯದಲ್ಲಿ ಮೈತ್ರಿ ಸರ್ಕಾರವೂ ಪತನವಾಗಿತ್ತು.
ಕೊರೋನಾ ನಿಯಂತ್ರಣ ಮತ್ತು ಲಾಕ್‌ಡೌನ್ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ-ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, “ಲಾಕ್‌ಡೌನ್ ನಂತರವೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಹಾಗಾದರೆ ಲಾಕ್‌ಡೌನ್‌ನಿಂದಾದ ಪ್ರಯೋಜನವೇನು? ಈಗ ನಿಜವಾಗಿ ಲಾಕ್‌ಡೌನ್ ಅಗತ್ಯವಿದೆ. ಸರ್ಕಾರ ಕೇವಲ ಆರ್ಥಿಕತೆಗೆ ಮಹತ್ವ ನೀಡುತ್ತಿದೆ, ಜನರ ಜೀವಗಳಿಗೆ ಬೆಲೆ ಇಲ್ಲವೇ?” ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
Follow us on Social media