Breaking News

ಗಾಂಧಿ ಕುಟುಂಬದ 3 ಟ್ರಸ್ಟ್‌ಗಳ ವಿರುದ್ಧ ತನಿಖೆಗೆ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ನವದೆಹಲಿ: ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‌ಗಳ ವಿರುದ್ಧದ ತನಿಖೆಗೆ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿದೆ ಎಂದು ತಿಳಿದುಬಂದಿದೆ.

ಹೌದು.. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‌ಗಳ ವಿರುದ್ಧ ಕೇಳಿಬಂದಿರುವ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಕೇಂದ್ರ ಸರ್ಕಾರ ತಿಳಿಸಿದ್ದು, ಈ ಸಂಬಂಧ ತನಿಖೆಗೆ ಸಮಿತಿ ರಚನೆ ಮಾಡಿದೆ. 

ಮೂಲಗಳ ಪ್ರಕಾರ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ಗಳ ವಿರುದ್ಧ ಆದಾಯ ತೆರಿಗೆ ವಂಚನೆ ಹಾಗೂ ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆಯಂತಹ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಅಂತರ್-ಸಚಿವಾಲಯ ಸಮಿತಿಯನ್ನು ರಚಿಸಿದೆ.

ಈ ಬಗ್ಗೆ ಗೃಹ ಸಚಿವಾಲಯದ ವಕ್ತಾರರು  ಟ್ವೀಟ್ ಮಾಡಿದ್ದು,  ಗಾಂಧಿ ಕುಟುಂಬ ನಡೆಸುವ ಟ್ರಸ್ಟ್‌ಗಳಿಂದ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ),ಆದಾಯ ತೆರಿಗೆ ಕಾಯ್ದೆ ಮತ್ತು ವಿದೇಶಿ ಕೊಡುಗೆ (ನಿಯಂತ್ರಣ)ಕಾಯ್ದೆಗಳಂತಹ ಕಾನೂನುಗಳ ಉಲ್ಲಂಘನೆಗಳ ಬಗ್ಗೆ ತನಿಖೆ ಕೇಂದ್ರೀಕರಿಸಲಿದೆ. ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಕಳೆದ ತಿಂಗಳು ಆಡಳಿತರೂಢ ಬಿಜೆಪಿಯು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಮನಮೋಹನ್ ಸಿಂಗ್ ಆಡಳಿತದ ಯುಪಿಎ ಸರಕಾರ ಅಧಿಕಾರವಿದ್ದಾಗ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಹಣವನ್ನು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ನೀಡಿತ್ತು ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದ್ದರು. ಈ ಟ್ರಸ್ಟ್ ಗಳಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಶೋಕ್ ಗಂಗೂಲಿ ಮತ್ತು ಬನ್ಸಿ ಮೆಹ್ತಾ.  ಸಿಇಒ ಡೀಪ್ ಜೋಶಿ ಇನ್ನಿತರರು ಇದ್ದಾರೆ ಎನ್ನಲಾಗಿದೆ.

ಏನಿದು ಆರೋಪ?
ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್, ಕಾಂಗ್ರೆಸ್​ನ ಮಾಜಿ ಅಧ್ಯಕ್ಷ, ಸಂಸದ ರಾಹುಲ್​ ಗಾಂಧಿ, ಪ್ರಿಯಾಂಕಾ ವಾದ್ರಾ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ 1991 ಜೂನ್​ನಲ್ಲಿ ಆರಂಭವಾಗಿದ್ದ ರಾಜೀವ್​ ಗಾಂಧಿ ಫೌಂಡೇಷನ್​​ ಟ್ರಸ್ಟಿಗಳಾಗಿದ್ದಾರೆ. ಅಲ್ಲದೇ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಮೂರೂ ಟ್ರಸ್ಟ್​ಗಳ ಚೇರ್​ಪರ್ಸ​ನ್ ಆಗಿದ್ದಾರೆ. 

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕಳೆದ ಕೆಲ ದಿನಗಳ ಹಿಂದೆ ಈ ಟ್ರಸ್ಟ್​ಗಳ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ರು. ಪ್ರಧಾನಮಂತ್ರಿಗಳ ರಿಲೀಫ್​ ಫಂಡ್​ನಿಂದ ರಾಜೀವ್​ ಗಾಂಧಿ ಫೌಂಡೇಷನ್​ಗೆ ಹಣ ನೀಡಲಾಗಿತ್ತು. ಒಂದು ಕುಟುಂಬದ ಶ್ರೀಮಂತಿಕೆಯ ಹಸಿವು ದೇಶಕ್ಕೆ ಮಾರಕವಾಗುವಂತಾಯಿತು ಎಂದೂ ಅವರೂ ಆರೋಪಿಸಿದ್ರು. ತಮ್ಮ ಆರೊಪಕ್ಕೆ ಸಾಕ್ಷಿಯಾಗಿ 2007-08 ಮತ್ತು 2005-2006ರ ಅವಧಿಯಲ್ಲಿ ಈ ಫೌಂಡೇಷನ್​ಗಳಿಗೆ ಹಣ ನೀಡಿದ ಸಂಸ್ಥೆಗಳ ಲಿಸ್ಟ್​ ಬಿಡುಗಡೆ ಮಾಡಿದ್ದರು. ಇದರಂತೆ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ, GAIL, ಗೃಹ ಇಲಾಖೆ, ಆರೋಗ್ಯ ಇಲಾಖೆಗಳಿಂದಲೂ ರಾಜೀವ್ ಗಾಂಧಿ ಫೌಂಡೇಷನ್​ಗೆ ಹಣ ನೀಡಿದ್ದರ ಬಗ್ಗೆ ಆ ಲಿಸ್ಟ್​ನಲ್ಲಿ ಬರೆಯಲ್ಪಟ್ಟಿತ್ತು.

ಅಷ್ಟೇ ಅಲ್ಲ ಕೇಂದ್ರ ಸಚಿವರಾದ ರವಿ ಶಂಕರ್​ ಪ್ರಸಾದ್​, ಚೀನಾದಿಂದಲೂ ರಾಜೀವ್​ ಗಾಂಧಿ ಫೌಂಡೇಷನ್​ಗೆ ಹಣ ನೀಡಲಾಗಿತ್ತು ಎಂದು ಆರೋಪ ಮಾಡಿದ್ದರು. ಇನ್ನು ಕೆಲವು ರಾಷ್ಟ್ರೀಯ ಮಾಧ್ಯಮಗಳು ಕೂಡ ಈ ಬಗ್ಗೆ ಇನ್ವೆಸ್ಟಿಗೇಷನ್ ರಿಪೋರ್ಟ್​ ಮಾಡಿ ಹಲವು ಮಾಹಿತಿ ಹೊರ ಹಾಕಿದ್ದವು. ಈ ಎಲ್ಲದರ ಹಿನ್ನೆಲೆಯಲ್ಲಿ ಇಂದು ಗೃಹ ಇಲಾಖೆ ತನಿಖೆಗೆ ಆದೇಶ ನೀಡಿದೆ ಎನ್ನಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×