ಮಂಗಳೂರು : ನಗರದ ಕೊವೀಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತ ದೇವರಾಜು(18)ನನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
“ಪೊಲೀಸ್ ಸಿಬ್ಬಂದಿಗಳಾದ ಶಂಕರಪ್ಪ ಲಮಣಿ ಮತ್ತು ಶಂಕರಪ್ಪ ನಂದ್ಯಾಲ್ ಅವರು ವೆನ್ಲಾಕ್ ಆಸ್ಪತ್ರೆಯಿಂದ ಓಡಿಹೋದ ಕೊವೀಡ್ ಸಕಾರಾತ್ಮಕ ಪಾಸಿಟಿವ್ ಇದ್ದ ಆರೋಪಿಗಳನ್ನು ತ್ವರಿತ ಮತ್ತು ಸಮರ್ಕವಾಗಿ ಪತ್ತೆ ಹಚ್ಚಿ ಬಂಧಿಸುವ ಮೂಲಕ ನಿಜವಾಗಿ ಹೀರೋಗಳಾಗಿದ್ದಾರೆ” ಎಂದು ನಗರ ಪೊಲೀಸ್ ಆಯುಕ್ತ ಸಿ.ಪಿ ವಿಕಾಸ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದೇ ವೇಳೆ ಆರೋಪಿ ದೇವರಾಜ್ ನಿಂದ ಅನೇಕರಿಗೆ ಸೋಂಕು ತಗುಲಿರಬಹುದು ಎಂಬ ಆತಂಕವನ್ನು ಪೊಲೀಸ್ ಆಯುಕ್ತರು ವ್ಯಕ್ತಪಡಿಸಿದ್ದಾರೆ.
ಸೋಮವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಸ್ಟೇಟ್ ಬ್ಯಾಂಕ್ ನ ಬಾರ್ ಬಳಿ ಆತನನ್ನು ಬಂಧಿಸಲಾಯಿತು. ಆತನ ಬಳಿ ಪ್ರಯಾಣಿಸಲು ಹಣವಿರದೆ ಸ್ಟೇಟ್ ಬ್ಯಾಂಕ್, ನೆಹರು ಮೈದಾನದ ಬಳಿ ಸುತ್ತಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಲತಃ . ಪುತ್ತೂರಿನ ದರ್ಬೆ ನಿವಾಸಿ, ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ದೇವರಾಜು(18) ಕೊರೊನಾ ಸೋಂಕು ಶಂಕೆಯ ಹಿನ್ನಲೆಯಲ್ಲಿ ಜು.1 ರಂದು ವೆನ್ಲಾಕ್ ಗೆ ಸ್ವತಃ ತೆರಳಿ ತಪಾಸಣೆಗೆ ಒಳಗಾಗಿದ್ದ. ಭಾನುವಾರ ಆತನ ವರದಿ ಪಾಸಿಟಿವ್ ಬಂದಿತ್ತು. ಈ ಹಿನ್ನಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಸಂಜೆ ವೇಳೆಗೆ ಆಸ್ಪತ್ರೆಯಿಂದ ಆತ ತಪ್ಪಿಸಿಕೊಂಡಿದ್ದ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ಆತನ ಪತ್ತೆ ಕಾರ್ಯಾಚರಣೆ ಅರಂಭಿಸಿದ್ದರು.
Follow us on Social media