ಬೆಂಗಳೂರು: ಭಾರತದ ಸಂಸ್ಕೃತಿ, ಪರಂಪರೆಗಳನ್ನು ದೇಶ, ವಿದೇಶಗಳಲ್ಲಿ ಬೆಳಗಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆಯಂದು ಅವರ ತತ್ತ್ವ ಮತ್ತು ಆದರ್ಶಗಳನ್ನು ಪಾಲಿಸುವ ಪಣ ತೊಡೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಘೋಷ ವಾಕ್ಯದ ಮೂಲಕ ಭಾರತೀಯರ ಹೃನ್ಮನಲ್ಲಿ ಅಜರಾಮರರಾಗಿರುವ, ಅಮೆರಿಕದ ಸಹೋದರ, ಸಹೋದರಿಯರೇ, ಎಂಬ ಸಂಬೋಧನೆ ಮೂಲಕ ಅಮೆರಿಕನ್ನರ ಮನಗೆದ್ದು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಜಗದಗಲ, ಮುಗಿಲಗಲ ವಿಸ್ತರಿಸಿದ ಉದಾತ್ತ ವಿಚಾರಗಳ ಪ್ರಖರ ವಾಗ್ಮಿ, ಯುಜನರ ಕಣ್ಮಣಿ, ವೀರ ಸನ್ಯಾಸಿ, ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯಂದು ಆ ಅಮರ ಚೇತನಕ್ಕೆ ಗೌರವಪೂರ್ವಕ ನಮನಗಳನ್ನು ಅರ್ಪಿಸೋಣ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗೌರವ ಸಲ್ಲಿಸಿದ್ದು, ಹಿಂದೂ ಧರ್ಮದ ನವೋನನ್ಯತೆಯನ್ನು ಜಗದುದ್ದಗಲಕ್ಕೆ ಪಸರಿಸಿದ, ಭಾರತದ ಯುವಚೈತನ್ಯವನ್ನೂ, ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ಪ್ರಖರ ವಾಗ್ಮಿ, ಯುವಕರ ಕಣ್ಮಣಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯಂದು ಆ ಅಮರ ಚೇತನಕ್ಕೆ ಗೌರವಪೂರ್ಣ ನಮನಗಳನ್ನು ಅರ್ಪಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಸಚಿವ ಡಾ.ಕೆ ಸುಧಾಕರ್ ಅವರು ಟ್ವೀಟ್ ಮಾಡಿ, ಭಾರತ ಕಂಡ ಶ್ರೇಷ್ಠ ತತ್ವಜ್ಞಾನಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು. ಭಾರತ ಮತ್ತೊಮ್ಮೆ ವಿಶ್ವಗುರುವಾಗಿ, ತನ್ನ ಸನಾತನ ತತ್ವಾದರ್ಶ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ವಿಶ್ವವನ್ನು ಮುನ್ನಡೆಸಬೇಕು ಎಂಬ ಮೇರು ಚಿಂತನೆ ಹೊಂದಿದ್ದ ಸ್ವಾಮಿ ವಿವೇಕಾನಂದರು ನಮಗೆ ಸದಾ ಆದರ್ಶಪ್ರಾಯ ಎಂದು ಹೇಳಿದ್ದಾರೆ.
Follow us on Social media