ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತೀಯ ಸೇನಾಪಡೆಗಳು ಎನ್’ಕೌಂಟರ್ ನಡೆಸಿದ್ದು, ಕಾರ್ಯಾಚರಣೆ ವೇಳೆ ಓರ್ವ ಸಿಆರ್’ಪಿಎಫ್ ಯೋಧ ಹುತಾತ್ಮರಾಗಿ, ಓರ್ವ ಉಗ್ರನ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶ್ರೀನಗರದ ಮಲ್ಭಾಗ್ ನಲ್ಲಿ ಕಳೆದ ರಾತ್ರಿ ಈ ಎನ್’ಕೌಂಟರ್ ನಡೆದಿದೆ ಎಂದು ವರದಿಗಳು ತಿಳಿಸಿವೆ. ಮಲ್ಭಾಗ್ ನಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಮಾಹಿತಿ ತಿಳಿದುಬರುತ್ತಿದ್ದಂತೆಯೇ ಸೇನಾ ಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿದ್ದವು.
ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವಹರು ಯೋಧರು ಗಾಯಗೊಂಡಿದ್ದು, ಕೂಡಲೇ ಅವರನ್ನು 92 ಬೇಸ್ ಆರ್ಮಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದರಲ್ಲಿ ಇಬ್ಬರು ಯೋಧರು ಚೇತರಿಸಿಕೊಳ್ಳುತ್ತಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ.
ಹುತಾತ್ಮರಾದ ಯೋಧರನ್ನು ಕುಲ್ದೀಪ್ ಉರಾನ್ ಎಂದು ಗುರ್ತಿಸಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಮಾಹಿತಿಗಳು ಬಂದಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸೇನಾಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ ಎನ್ನಲಾಗುತ್ತಿದೆ.
Follow us on Social media