Breaking News

ಲಡಾಕ್ ನಲ್ಲಿ ಭಾರತದ ಪ್ರಾಂತ್ಯದ ಮೇಲೆ ಕಣ್ಣಿಟ್ಟವರಿಗೆ ಸರಿಯಾದ ಪ್ರತ್ಯುತ್ತರ ನೀಡಲಾಗಿದೆ:ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಗಡಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ಭಾರತದ ಬದ್ಧತೆಯನ್ನು ಜಗತ್ತು ಕಂಡಿದೆ. ಪೂರ್ವ ಲಡಾಕ್‌ನಲ್ಲಿ, ಭಾರತದ ಪ್ರಾಂತ್ಯಗಳನ್ನು ಬಯಸುವವರಿಗೆ ತಕ್ಕ ಉತ್ತರವನ್ನು ನಮ್ಮ ಸೇನೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆಕಾಶವಾಣಿಯ ತಿಂಗಳ ಕೊನೆಯ ಭಾನುವಾರದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೊರೋನಾ ಸಂಕಷ್ಟದ ನಡುವೆ ಈ ವರ್ಷ ನಮ್ಮ ದೇಶ ಹಲವು ಸವಾಲುಗಳಿಗೆ ಎದುರಾಯಿತು, ಆಂಫಾನ್ ಚಂಡಮಾರುತ, ನಿಸರ್ಗ ಚಂಡಮಾರುತ, ಮಿಡತೆ ದಾಳಿ, ಅಲ್ಲಲ್ಲಿ ಸಣ್ಣ ಭೂಕಂಪಗಳು, ಹೀಗೆ ಇವೆಲ್ಲದರ ಮಧ್ಯೆ ನಮ್ಮ ನೆರೆ ದೇಶ ನೀಡುತ್ತಿರುವ ಕಿರುಕುಳ ವಿರುದ್ಧ ಸಹ ಹೋರಾಡಬೇಕಾಗಿದೆ. ಶಾಂತಿ ಕಾಪಾಡುವಲ್ಲಿ ಭಾರತದ ಬದ್ಧತೆ ಮತ್ತು ಶಕ್ತಿಯನ್ನು ಇಡೀ ಪ್ರಪಂಚ ನೋಡಿದೆ ಎಂದರು.

ಕಳೆದ ಜೂನ್ 15ರಂದು ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 20 ಮಂದಿ ಯೋಧರಿಗೆ ಭಾರತ ಗೌರವ ನಮನ ಸಲ್ಲಿಸುತ್ತಿದೆ. ಅವರ ತ್ಯಾಗ, ಬಲಿದಾನವನ್ನು ಈ ದೇಶ ಮರೆಯುವುದಿಲ್ಲ, ತಮ್ಮ ಪುತ್ರನನ್ನು ಯುದ್ಧದಲ್ಲಿ ಕಳೆದುಕೊಂಡ ಪೋಷಕರು ಇನ್ನೂ ಕೂಡ ಭಾರತದ ಸೇನೆಗೆ ತಮ್ಮ ಇತರ ಮಕ್ಕಳನ್ನು ಕಳುಹಿಸಲು ಮುಂದಾಗಿದ್ದಾರೆ. ಹಿಂಜರಿಯುತ್ತಿಲ್ಲ, ಇದು ಅವರ ಉತ್ಸಾಹ ಮತ್ತು ತ್ಯಾಗ ಮನೋಭಾವವನ್ನು ತೋರಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ಬಿಹಾರದ ಕುಂದನ್ ಕುಮಾರ್ ಎಂಬ ಹುತಾತ್ಮ ಯೋಧನ ತಂದೆ, ನನ್ನ ಮೊಮ್ಮಗನನ್ನು ಕೂಡ ಸೇನೆಗೆ ಕಳುಹಿಸುತ್ತೇನೆ ಎನ್ನುತ್ತಾರೆ, ಇದು ಹುತಾತ್ಮ ಯೋಧರ ಕುಟುಂಬದವರ ಉತ್ಸಾಹ ಮನೋಭಾವವನ್ನು ತೋರಿಸುತ್ತದೆ. ಇಂಥ ಕುಟುಂಬದವರ ತ್ಯಾಗ ಮನೋಭಾವ ಪ್ರಶಂಸನೀಯ ಎಂದು ಹೇಳಿದರು.

ಇತ್ತೀಚಿನ ಗಡಿ ಸಂಘರ್ಷದಲ್ಲಿ ಭಾರತದ ಶಕ್ತಿ ಮತ್ತು ಶಾಂತಿಯ ಬದ್ಧತೆಯನ್ನು ಜಗತ್ತು ಕಂಡಿದೆ. ಸ್ನೇಹವನ್ನು ಹೇಗೆ ಆಚರಿಸಬೇಕೆಂದು ಭಾರತಕ್ಕೆ ತಿಳಿದಿದ್ದರೆ, ನಮ್ಮ ತಂಟೆಗೆ ಬಂದಾಗ ಅದಕ್ಕೆ ಸೂಕ್ತ ಉತ್ತರವನ್ನು ಹೇಗೆ ನೀಡಬೇಕೆಂದು ಕೂಡ ಭಾರತಕ್ಕೆ ತಿಳಿದಿದೆ. ಲಡಾಕ್‌ನಲ್ಲಿ, ನಮ್ಮ ಪ್ರಾಂತ್ಯಗಳನ್ನು ಅಪೇಕ್ಷಿಸುವವರಿಗೆ ಸೂಕ್ತವಾದ ಉತ್ತರವನ್ನು ನೀಡಲಾಗಿದೆ ಎಂದು ಮೋದಿ ಹೇಳಿದರು.

ಪೂರ್ವ ಲಡಾಕ್ ಸಂಘರ್ಷದ ಬಳಿಕ ಹಲವರು ಸ್ವದೇಶಿ ವಸ್ತುಗಳ ಮೊರೆ ಹೋಗುತ್ತಿದ್ದಾರೆ, ದೇಶಿ ವಸ್ತುಗಳ ಬಳಕೆಗೆ ಕರೆ ನೀಡುತ್ತಿದ್ದಾರೆ. ಅಸ್ಸಾಂನ ರಜನಿ ಎಂಬುವವರು, ನಾನು ದೇಶಿ ವಸ್ತುಗಳನ್ನೇ ಇನ್ನು ಮುಂದೆ ಬಳಸುತ್ತೇನೆ ಮಾತ್ರವಲ್ಲದೆ ಇತರರಿಗೆ ಸ್ಥಳೀಯ ವಸ್ತುಗಳನ್ನು ಬಳಸುವಂತೆ ಉತ್ತೇಜಿಸುತ್ತೇನೆ ಎಂದು ಹೇಳುತ್ತಾರೆ, ಹೀಗೆ ದೇಶದ ನೂರಾರು ಭಾಗಗಳಿಂದ ಅನೇಕ ಮಂದಿ ನನಗೆ ಸಂದೇಶಗಳನ್ನು ಕಳುಹಿಸುತ್ತಾರೆ, ಸ್ವಾವಲಂಬಿಗಳಾಗುವಲ್ಲಿ ಭಾರತೀಯರು ತೆಗೆದುಕೊಂಡಿರುವ ಈ ದಿಟ್ಟ ನಿರ್ಧಾರ ಶ್ಲಾಘನೀಯ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×