ಮಂಗಳೂರು : ಕುದ್ರೋಳಿಯ ಕಸಾಯಿಖಾನೆಯಿಂದ ಗೋಮಾಂಸವನ್ನು ಕಂಕನಾಡಿಯ ಮಾಂಸ ಮಾರುಕಟ್ಟೆಗೆ ಸಾಗಿಸುತ್ತಿದ್ದ ವಾಹನವನ್ನು ತಂಡವೊಂದು ತಡೆದು ನಿಲ್ಲಿಸಿ ವಾಹನ ಚಾಲಕನನ್ನು ಥಳಿಸಿದ್ದ ಹಿನ್ನಲೆ ತಂಡದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುರತ್ಕಲ್ನ ಹೊಸಬೆಟ್ಟು ನಿವಾಸಿ ದೀಕ್ಷಿತ್ ಕುಮಾರ್ (19), ಕುಚ್ಚಿಗುಡ್ಡೆಯ ರಾಜು ಪೂಜಾರಿ (19), ಮಂಗಳೂರು ಅತ್ತಾವರದ ಸಂತೋಷ್ ಕುಮಾರ್(31), ಬಾಲಚಂದ್ರ (28), ಉಳ್ಳಾಲದ ರಕ್ಷಿತ್ ಪೂಜಾರಿ (22) ಎಂದು ತಿಳಿದುಬಂದಿದೆ.
ಕುದ್ರೋಳಿ ಮಾರುಕಟ್ಟೆಯಲ್ಲಿ ಗೋಮಾಂಸ ಅಂಗಡಿಯನ್ನು ನಡೆಸುತ್ತಿರುವ ಝಾಕಿರ್ ಎಂಬಾತನಿಗೆ ಗೋಮಾಂಸ ತಲುಪಿಸಲು ಕುದ್ರೋಳಿಯ ಅಬ್ದುಲ್ ರಶೀದ್ (57) ತನ್ನ ಆಟೋ ರಿಕ್ಷಾದಲ್ಲಿ 200 ಕೆಜಿ ಗೋಮಾಂಸವನ್ನು ಸಾಗಿಸುತ್ತಿದ್ದನೆಂದು ಹೇಳಲಾಗಿದೆ. ಗೋಮಾಂಸ ಸಾಗಿಸುತ್ತಿದ್ದ ಸಂದರ್ಭ ತಂಡವೊಂದು ಆಟೋ ರಿಕ್ಷಾವನ್ನು ಫಳ್ನೀರ್ ಬಳಿ ತಡೆಹಿಡಿದಿದ್ದು, ಚಾಲಕ ರಶೀದ್ ಮೇಲೆ ಹಲ್ಲೆ ನಡೆಸಿ ಗಾಡಿಗೆ ಹಾನಿ ಮಾಡಿದ್ದಾರೆ ಎಂದು ವರದಿ ತಿಳಿಸಿತ್ತು. ಅಲ್ಲದೇ, ತಂಡದ ಸದಸ್ಯರು ಗೋಮಾಂಸದ ದಾಸ್ತಾನಿಗೆ ಸೀಮೆ ಎಣ್ಣೆ ಸುರಿದಿದ್ಧಾರೆ ಎನ್ನಲಾಗಿದೆ. ಈ ಸಂದರ್ಭ ಘಟನಾ ಸ್ಥಳದಲ್ಲಿ ಹೆಚ್ಚು ಜನ ಸೇರಲು ಪ್ರಾರಂಭಿಸಿದ್ದು, ತಂಡದ ಸದಸ್ಯರು ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ಪ್ರಕರಣದ ಬಗ್ಗೆ ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Follow us on Social media