ನವದೆಹಲಿ:ಕಳೆದ ಸೋಮವಾರ ನಡೆದ ಘರ್ಷಣೆಯಲ್ಲಿ ಚೀನಾ ಸೇನಾಪಡೆ ಗಡಿಭಾಗ ದಾಟಿ ಭಾರತದ ಪ್ರಾಂತ್ಯದೊಳಗೆ ಪ್ರವೇಶಿಸಿಲ್ಲ ಮತ್ತು ಮಿಲಿಟರಿ ಕೇಂದ್ರಗಳನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆಯಲ್ಲಿ ನೀಡಿರುವ ಹೇಳಿಕೆ ಬೇಜವಾಬ್ದಾರಿ ಕುಚೇಷ್ಠೆಯ ವ್ಯಾಖ್ಯಾನವಾಗಿದೆ ಎಂಬ ವಿಪಕ್ಷಗಳ ಟೀಕೆಗೆ ಪ್ರಧಾನ ಮಂತ್ರಿ ಕಾರ್ಯಾಲಯ ಶನಿವಾರ ಸ್ಪಷ್ಟನೆ ನೀಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ಗಡಿ ವಾಸ್ತವ ರೇಖೆಯ ನಮ್ಮ ಭಾಗಕ್ಕೆ ಚೀನಾ ಸೇನಾಪಡೆ ನುಗ್ಗಲು ಸಾಧ್ಯವಾಗಿಲ್ಲ, ನಮ್ಮ ಸೈನಿಕರು ಧೈರ್ಯದಿಂದ ಚೀನಾ ಯೋಧರನ್ನು ಹಿಮ್ಮೆಟ್ಟಿದ್ದಾರೆ. ನಮ್ಮ ಭಾಗದಲ್ಲಿ ಚೀನಾ ಸೈನಿಕರಿಗೆ ಬರಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ. ಗಡಿ ವಾಸ್ತವ ರೇಖೆಯನ್ನು ಉಲ್ಲಂಘಿಸುವ ಪ್ರಯತ್ನಗಳಿಗೆ ನಮ್ಮ ಸೇನೆ ದಿಟ್ಟತನದಿಂದ ದೃಢವಾಗಿ ಪ್ರತಿಕ್ರಿಯೆ ನೀಡುತ್ತದೆ ಎಂಬರ್ಥದಲ್ಲಿ ಪ್ರಧಾನಿ ಮಾತನಾಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.
16 ಬಿಹಾರ ರೆಜಿಮೆಂಟ್ ಸೈನಿಕರ ತ್ಯಾಗ, ಬಲಿದಾನಗಳಿಂದ ಚೀನಾ ಸೈನಿಕರು ಒಳಗೆ ನುಗ್ಗಿ ನಮ್ಮ ಪ್ರಾಂತ್ಯದೊಳಗೆ ಬರುವ ಪ್ರಯತ್ನ ವಿಫಲವಾಯಿತು. ಗಡಿ ವಾಸ್ತವ ರೇಖೆಯಲ್ಲಿ ಯಾವುದೇ ಏಕಪಕ್ಷೀಯ ಬದಲಾವಣೆಗೆ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ.
ಲಡಾಕ್ ನಲ್ಲಿ ಭಾರತದ ಪ್ರಾಂತ್ಯದೊಳಗೆ ಯಾವುದೇ ಹೊರಗಿನವರು ಬರಲಿಲ್ಲ ಎಂದು ಪ್ರಧಾನಿ ಸಭೆಯಲ್ಲಿ ನೀಡಿದ್ದ ಹೇಳಿಕೆಗೆ ಪಿ ಚಿದಂಬರಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಟೀಕಿಸಿದ್ದರು.
Follow us on Social media