ನವದೆಹಲಿ: ಭಾರತ ಮತ್ತು ಚೀನಾ ಸೈನಿಕರ ನಡುವೆ ಗಾಲ್ವಾನ್ ನಲ್ಲಿ ನಡೆದ ಸಂಘರ್ಷ ಪೂರ್ವನಿಯೋಜಿತ ಕೃತ್ಯ ಎಂದು ಕೇಂದ್ರ ಸರ್ಕಾರ ಚೀನಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ತಾರಕಕ್ಕೇರಿದೆ. ಪರಿಣಾಮ ಸೋಮವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಕನಿಷ್ಟ 20 ಸೈನಿಕರು ಮೃತಪಟ್ಟಿದ್ದಾರೆ. ಈ ಘಟನೆಯ ನಂತರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇಂದು ದೂರವಾಣಿ ಕರೆ ಮೂಲಕ ಚರ್ಚೆ ನಡೆಸಿದ್ದಾರೆ.
ಗಡಿಯಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ ಕುರಿತು ಪೋನ್ ಮೂಲಕ ಚರ್ಚೆ ನಡೆಸಿರುವ ಎರಡೂ ದೇಶದ ನಾಯಕರು, ಈ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಮತ್ತು ನ್ಯಾಯಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ. ಇನ್ನು ಚರ್ಚೆ ವೇಳೆ ಚೀನಾ ಸೈನಿಕರ ನಡೆ ವಿರುದ್ಧ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಸೈನಿಕರ ಸಂಘರ್ಷವನ್ನು ಚೀನಾ ಸೈನಿಕರ ಪೂರ್ವನಿಯೋಜಿತ ಕೃತ್ಯ ಎಂದು ಜೈ ಶಂಕರ್ ಟೀಕಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಗಾಲ್ವಾನ್ನಲ್ಲಿ ನಡೆದ ಕೃತ್ಯ ಚೀನೀ ಸೈನಿಕರ ಪೂರ್ವನಿಯೋಜಿತ ಕೃತ್ಯವಾಗಿದ್ದು, ಇದು ಉಭಯ ದೇಶಗಳ ನಡುವಿನ ಶಾಂತಿ-ಸೌಹಾರ್ಧತೆಯ ನಿರ್ವಹಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಚೀನಾ ಸೈನಿಕರು ತಮ್ಮ ತಪ್ಪನ್ನು ತಿದ್ದುಕೊಂಡು ತಮ್ಮ ಗಡಿಗೆ ಮರಳಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಇನ್ನು ಉಭಯ ನಾಯಕರೂ ಗಡಿಯಲ್ಲಿ ಶಾಂತಿ ನೆಲೆಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದು, ತಪ್ಪು ಮಾಡಿದ ಸೈನಿಕರ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಮತ್ತು ಭವಿಷ್ಯದಲ್ಲಿ ಇದು ಮರುಕಳಿಸದಂತೆ ಕ್ರಮಕೈಗೊಳ್ಳುವ ಕುರಿತು ಪರಸ್ಪರ ಭರವಸೆ ನೀಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಭಾರತದ ಚೀನಾ ಗಡಿ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ 5 ಗಂಟೆಗೆ ಸರ್ವ ಪಕ್ಷಗಳ ಸಭೆ ಕೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದ್ದು, ಇಂಡೋ-ಚೀನಾ ಗಡಿ ವಿವಾದದ ಕುರಿತು ಭಾರತ ಸರ್ಕಾರ ಭವಿಷ್ಯದಲ್ಲಿ ಎಂತಹಾ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಈ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
Follow us on Social media