ತಿರುಪತಿ: ಭದ್ರತಾ ಸಿಬ್ಬಂದಿಗೆ ಕೊರೋನಾ ಸೋಂಕು ಒಕ್ಕರಿಸಿದ ಹಿನ್ನಲೆಯಲ್ಲಿ ಆಂಧ್ರ ಪ್ರದೇಶದ ಕಾಣಿಪಾಕಂನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಸ್ವಯಂಭು ವರಸಿದ್ಧಿ ವಿನಾಯಕ ಸ್ವಾಮಿ ದೇಗುಲವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕಾಣಿಪಾಕಂನಲ್ಲಿರುವ ಶ್ರೀ ಸ್ವಯಂಭು ವರಸಿದ್ಧಿ ವಿನಾಯಕ ಸ್ವಾಮಿ ದೇಗುಲದ ಭದ್ರತಾ ಸಿಬ್ಬಂದಿಗೆ ಇತ್ತೀಚೆಗೆ ಕೊರೋನಾ ಸೋಂಕು ದೃಢವಾಗಿತ್ತು. ಈ ಹಿನ್ನಲೆಯಲ್ಲಿ ದೇಗುಲವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ದೇಗುಲದಾದ್ಯಂತ ಸಾನಿಟೈಸೇಷನ್ ಮಾಡಲಾಗುತ್ತಿದೆ.
ಇಡೀ ದೇಗುಲದ ಆವರಣವನ್ನು ಮುಚ್ಚಲಾಗಿದ್ದು, ಒಳಗಿದ್ದವರನ್ನು ಹೊರಗೆ ಕಳುಹಿಸಿ ದೇಗುಲದ ಅವರಣದಲ್ಲಿ ಡಿಸಿನ್ಫೆಕ್ಷನ್ ಮಾಡಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ದೇಗುಲವನ್ನು 2 ದಿನಗಳ ಕಾಲ ಮುಚ್ಚಲಾಗುತ್ತಿದೆ. ಜೂನ್ 17ರಿಂದ ಮತ್ತೆ ದೇಗುಲ ಆರಂಭವಾಗಲಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಈ ಹಿಂದೆ ದೇಗುಲ ಆರಂಭಕ್ಕೂ ಮುನ್ನ ದೇಗುಲದ 60 ಸಿಬ್ಬಂದಿಗಳನ್ನು ಕೊರೋನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಈ ಪೈಕಿ ಓರ್ವ ಸಿಬ್ಬಂದಿಯ ವರದಿ ಪಾಸಿಟಿವ್ ಬಂದಿದೆ. ಪ್ರಸ್ತುತ ಸೋಂಕಿತ ಸಿಬ್ಬಂದಿಯನ್ನು ಆಸ್ಪತ್ರಗೆ ದಾಖಲಿಸಲಾಗಿದ್ದು, ಆತನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
2 ತಿಂಗಳ ಲಾಕ್ ಡೌನ್ ಬಳಿಕ ಇತ್ತೀಚೆಗಷ್ಟೇ ತಿರುಪತಿ ತಿರುಮಲ ದೇಗುಲ ಸೇರಿದಂತೆ ಆಂಧ್ರ ಪ್ರದೇಶದಲ್ಲಿ ಎಲ್ಲ ದೇಗುಲಗಳನ್ನೂ ದರ್ಶನಕ್ಕಾಗಿ ತೆರೆಯಲಾಗಿತ್ತು. ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ದೇಗುಲ ಪ್ರವೇಶ ಮುನ್ನ ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಥರ್ಮಲ್ ಸ್ಕಾನಿಂಗ್ ಕಡ್ಡಾಯ ಮಾಡಲಾಗಿತ್ತು. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ ಇದೀಗ ಕಾಣಿಪಾಕಂ ಗಣೇಶ ದೇಗುಲದ ಭದ್ರತಾ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಇದೀಗ ಆತಂಕ ಮೂಡಿಸಿದೆ.
Follow us on Social media