ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್ ಎಸ್ ಜಲಾಶಯದ ಬಳಿ ನಿರ್ಮಾಣವಾಗುತ್ತಿರುವ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಪಕ್ಕದಲ್ಲಿ ಸರಿಸಮನಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಮಾಡುವುದು ಸರಿಯಲ್ಲ ಎಂದು ಇತಿಹಾಸ ತಜ್ಞ ಪಿ.ವಿ.ನಂಜರಾಜೆ ಅರಸ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ಎಸ್ ಅಣೆಕಟ್ಟು ಕಟ್ಟಲು ದೃಢ ಸಂಕಲ್ಪ ಮಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಅದಕ್ಕಾಗಿ ತನ್ನ ರಾಜ್ಯದ ಬೊಕ್ಕಸದಲ್ಲಿದ್ದ ಹಣ ಹಾಗೂ
ಕೋಟ್ಯಂತರ ರೂ. ಮೌಲ್ಯದ ಅಭರಣಗಳನ್ನು ದಾನವಾಗಿ ನೀಡಿದ್ದರು. ಆದರೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಏನೇನೂ ಇಲ್ಲಾ ಎಂದು ಹೇಳಿದರು.
ಅಣೆಕಟ್ಟೆ ನಿರ್ಮಾಣ ಕಾರ್ಯ ೧೯೦೭ರಿಂದ ಆರಂಭಗೊಂಡು ೧೯೩೨ರಲ್ಲಿ ಮುಕ್ತಾಯಗೊಳ್ಳುತ್ತದೆ. ಈ ಅವಧಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಮಾತ್ರವಲ್ಲದೆ ಸುಮಾರು ೭ ಮುಖ್ಯ ಇಂಜಿನಿಯರ್ ಹಾಗೂ ೫ ಮಂದಿ ದಿವಾನರು ಕೆಲಸಮಾಡಿದ್ದಾರೆ. ಆದರೂ ಅಣೆಕಟ್ಟು ಕಟ್ಟಿದವರು ಸರ್.ಎಂ.ವಿಶ್ವೇಶ್ವರಯ್ಯ ಅವರು ಎಂದು ಅವರ ಕುರುಡು ಅಭಿಮಾನಿಗಳು ಬಿಂಬಿಸುತ್ತಿದ್ದಾರೆ. ಅದು ತಪ್ಪು ಎಂದು ಅವರು ತಿಳಿಸಿದರು.
ಕೆಆರ್ಎಸ್ ಮೂಲ ಯೋಜನೆಯನ್ನು ೧೯೦೮ರಲ್ಲಿ ಮೊದಲು ರೂಪಿಸಿದವರು ಮುಖ್ಯ ಇಂಜಿನಿಯರ್ ಆಗಿದ್ದ ಕ್ಯಾಪ್ಟನ್ ನಿಕೋಲಸ್ ದಾಸ್ ಅವರು. ಅದಕ್ಕೆ ಮದ್ರಾಸ್ ಸರ್ಕಾರ ಆಕ್ಷೇಪ ಎತ್ತಿದ್ದರಿಂದ ಕಾಮಗಾರಿ ಆರಂಭವಾಗಲಿಲ್ಲ. ನಂತರ ನಿಕೋಲಸ್ ದಾಸ್ ಅವರು ಕಟ್ಟೆನಿರ್ಮಾಣ ವೇಳೆ ಅಪಾರ ನದಿ ನೀರಿನಿಂದಾದ ಅನಾಹುತವನ್ನು ವೀಕ್ಷಿಸುವ ವೇಳೆಯೇ ನೀರಿನಲ್ಲಿ ಕೊಚ್ಚಿಹೋಗಿ ಮರಣ ಹೊಂದಿದ್ದರಿಂದ ಬಾಂಬೆ ಪ್ರಾಂತ್ಯದಲ್ಲಿ ಇಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯ ಅವರನ್ನು ನಾಲ್ವಡಿಯವರು ಕರೆಸಿಕೊಳ್ಳುತ್ತಾರೆ. ೧೯೧೧ರಲ್ಲಿ ಮುಖ್ಯ ಇಂಜಿನಿಯರ್ ಆಗಿ ನೇಮಿಸುತ್ತಾರೆ. ನಂತರ ಮದ್ರಾಸ್ ಸರ್ಕಾರದ ಜೊತೆ ಒಪ್ಪಂದ ನಡೆದ ನಂತರ ಕಾಮಗಾರಿ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿಯೂ ವಿಶ್ವೇಶ್ವರಯ್ಯ ನೇಮಕವಾದರು. ಈ ನಡುವೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಾಲ್ವಡಿಯವರು ೧೯೧೮ರಲ್ಲಿ ನೇಮಿಸಿದ ಮಿಲ್ಲರ್ ಆಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶ್ವೇಶ್ವರಯ್ಯ ದಿವಾನ್ ಹುದ್ದೆಗೆ ರಾಜೀ
ನಾಮೆ ನೀಡುತ್ತಾರೆ. ೧೯೧೧-೧೯೩೨ರವರೆಗೆ ನಡೆದ ಕೆಆರ್ಎಸ್ ಕಾಮಗಾರಿಯಲ್ಲಿ ವಿಶ್ವೇಶ್ವರಯ್ಯ ಕೇವಲ ೧ ವರ್ಷ ಇಂಜಿನಿಯರ್ ಆಗಿದ್ರು. ನಂತರ ಕರ್ಪೂರ ಶ್ರೀನಿವಾಸರಾವ್, ಬಿ.ಸುಬ್ಬರಾವ್, ಎಸ್.ಕಡಾಂಬಿ,
ಕೃಷ್ಣಯ್ಯಂಗಾರ್, ಜಾನ್ ಬೋರ್, ಕೆ.ಆರ್.ಶೇಷಾಚಾರ್ ಮತ್ತು ಎಸ್.ಶ್ರೀನಿವಾಸ ಐಯ್ಯರ್ ಎಂಬ ೭ ಮಂದಿ ಮುಖ್ಯ ಇಂಜಿನಿಯರ್ಗಳು ಕೆಲಸ ನಿರ್ವಹಿಸಿದ್ದಾರೆ. ಆದರೆ ಕೆಆರ್ಎಸ್ ವಿಚಾರದಲ್ಲಿ ಮುಖ್ಯ ರೂವಾರಿಗಳಾದ ನಾಲ್ವಡಿ ಹೆಸರನ್ನು ಬಿಟ್ಟು ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ ೫ ದಿವಾನರ ಪೈಕಿ ಸರ್ ಎಂವಿ ಅವರ ಹೆಸರನ್ನು ಮಾತ್ರ ಹೇಳಲಾಗುತ್ತಿದೆ ಇದು ಚಾರಿತ್ರಿಕ ಮೋಸ ಎಂದರು.
ನಾಲ್ವಡಿಯವರು ಕಷ್ಟಪಟ್ಟು ಅಣೆಕಟ್ಟೆ ನಿರ್ಮಿಸಿದ್ದಾರೆ. ಆದ್ದರಿಂದ ಅವರ ಪ್ರತಿಮೆ ಪಕ್ಕದಲ್ಲಿ ಸರಿಸಮನಾಗಿ ಸಂಬಳ ತೆಗೆದುಕೊಂಡು ಕೆಲಸ ಮಾಡಿದ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ರಾಜರಿಗೆ ಅವಮಾನ ಮಾಡಬಾರದು. ಮೋದಿ ಪ್ರಧಾನಿಯಾಗಿದ್ದಾರೆ. ಅವರ ಯೋಜನೆಗಳನ್ನು ಅವರ ಆಪ್ತಕಾರ್ಯದರ್ಶಿಗಳು, ಸಚಿವರು ಅನುಷ್ಠಾನಮಾಡಲು ಮುಂದಾಗುತ್ತಾರೆ. ಹಾಗೆಂದ ಮಾತ್ರಕ್ಕೆ ಮೋದಿಗೆ ಸರಿಸಮನಾಗಿ ಸಚಿವರು, ಅಧಿಕಾರಿಗಳ ಫೋಟೋವನ್ನು ಯಾರೂ ಸಹ ಹಾಕಲ್ಲ. ಇದನ್ನು ಅರ್ಥ ಮಾಡಿಕೊಂಡು ಸರ್ಕಾರಕೂಡಲೇ ಈ ನಿರ್ಧಾರ ಕೈಬಿಟ್ಟು, ನಾಲ್ವಡಿ ಯವರ ಏಕ ಪ್ರತಿಮೆ ನಿರ್ಮಾಣ ಮಾಡಬೇಕು. ವಿಶ್ವೇಶ್ವರಯ್ಯ ಪ್ರತಿಮೆ ಎಲ್ಲಿ ಬೇಕಾದರೂ ಮಾಡಿಕೊಳ್ಳಲಿ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕೆಆರ್ಎಸ್ ನಲ್ಲಿ ಮಾಡುವುದೇ ಆದರೆ ೭ ಜನ ಇಂಜಿನಿಯರ್ಗಳ ಪ್ರತಿಮೆಯನ್ನು ನಾಲ್ವಡಿಯವರ ಪ್ರತಿಮೆಯ ಕೆಳಮಟ್ಟದಲ್ಲಿ ಮಾಡಲಿ ಎಂದು ಒತ್ತಾಯಿಸಿದರು.
ಒಡೆಯರ್ಗೆ ಅಪಮಾನ
೨೦೧೫ ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಕೇಳಿದ್ದರು. ಈ ವಿಚಾರದಲ್ಲಿ ರಾಜ್ಯದ ಯಾವ ಸಂಸದರು ಒತ್ತಡ ತರಲಿಲ್ಲ. ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ತಿರಸ್ಕರಿಸಿ ಬೇರೆ ಹೆಸರು ಸೂಚಿಸುವಂತೆ ಹೇಳುವ ಮೂಲಕ ನಾಲ್ವಡಿ ಆವರಿಗೆ ಅಪಮಾನ ಮಾಡಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಅರ್ಎಸ್ ಬಳಿ ನಾಲ್ವಡಿ ಕೈಷ್ಣರಾಜ ಒಡೆಯರ್ ಅವರ ಪ್ರತಿಮೆ ನಿರ್ಮಿಸಲು ಮಾತ್ರ ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿತ್ತು. ಆದರೇ ಈಗ ಬಿಜೆಪಿ ಸರ್ಕಾರ ನಾಲ್ವಡಿ ಸರಿಸಮಾನವಾಗಿ ಸರ್ಎಂವಿ ಪ್ರತಿಮೆ ನಿರ್ಮಿಸಲು ಹೊರಟಿದ್ದು, ಈ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಅಸಂಭದ್ದವಾದುದು, ಇದನ್ನು ಖಂಡಿಸುತ್ತೇವೆ ಎಂದರು.
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರಿಡುವ ಸಂಬಂದ ಕೇಂದ್ರದ ನಿಲುವನ್ನು ರಾಜ ವಂಶಸ್ಥರು ಹಾಗೂ ರಾಜಮಾತೆ ಪ್ರಮೋದಾ ದೇವಿ ಅವರು ಖಂಡಿಸಿ ಪ್ರತಿಭಟಿಸುವುದನ್ನು ಬಿಟ್ಟು ಜಯಚಾಮರಾಜೇಂದ್ರ ಒಡೆಯರ್ ಹೆಸರಿಡುವಂತೆ ಹೇಳಿದರು. ಇಲ್ಲೂ ನಾಲ್ವಡಿ ಅವರ ಸಾಧನೆ ಗೌಣವಾಯಿತು. ಸರ್ಕಾರ ನಾಲ್ವಡಿ ಅವರ ಜಂಯತಿ ಮಾಡಿದರೆ ಸಾಲದು, ಅವರ ಗೌರವ ಕಾಪಾಡುವ ನಿಟ್ಟಿನಲ್ಲಿ ರಾಜ ಮನೆತನದ ಮಾನ ಉಳಿಸಬೇಕು ಎಂದು ಹೇಳಿದರು.
ಇದೀಗ ಕೆ.ಆರ್.ಎಸ್ ನಲ್ಲಿ ನಾಲ್ವಡಿಯವರ ಪ್ರತಿಮೆ ಜೊತೆಗೆ ಸರಿಸಮನಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡುವ ನಿರ್ಧಾರ ಕೈಗೊಳ್ಳುವ ಮೂಲಕ ಸರ್ಕಾರವೇ ರಾಜಮನೆತನಕ್ಕೆ ಅಪಮಾನ ಮಾಡುತ್ತಿದೆ, ಒಂದು ವೇಳೆ ಕೆಆರ್ಎಸ್ ಬಳಿ ಸರ್.ಎಂ,ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಿದರೆ ಮಂಡ್ಯ ಸಾಹಿತಿಗಳು, ಪ್ರಗತಿಪರರು ಹಾಗೂ ವಿವಿಧ ಸಂಘಟನೆಗಳ ಜೊತೆಗೂಡಿ ರಾಜ್ಯಾಂದ್ಯತ ಉಗ್ರ ಪ್ರತಿಭಟನೆ ಮಾಡುತ್ತೇವೆ. ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಸಂಘದ ಅದ್ಯಕ್ಷ ಜಯಪ್ರಕಾಶ್ ಗೌಡ, ಪ್ರಗತಿಪರ ಮುಖಂಡರಾದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಮೈಸೂರು ಮಾಜಿ ಮೆಯರ್ ಪುರುಷೋತ್ತಮ್, ಡಾ. ಶಿವಕುಮಾರ್, ಹುಲ್ಕೆರೆ ಮಹಾದೇವ್, ಎಂ.ಬಿ.ಶ್ರೀನಿವಾಸ್ ಉಪಸ್ಥಿತರಿದರು.
Follow us on Social media