ಬೆಂಗಳೂರು: ಕೊರೋನಾ ಲಾಕ್’ಡೌನ್ ಬಳಿಕ ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಿದ್ದು, ಕೇವಲ 2 ತಿಂಗಳುಗಳಲ್ಲಿ ಬರೋಬ್ಬರಿ 2,000 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.
ಇವುಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಹಿರಿಯ ನಾಗರೀಕರು ಹಾಗೂ ಒಂಟಿ ಮಹಿಳೆಯರೇ ಹೆಚ್ಚಾಗಿ ಗುರಿಯಾಗಿರುವುದು ಕಂಡು ಬಂದಿದೆ.
ಸಿಟಿ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಡೇಟಾ ಪ್ರಕಾರ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ 1,308 ಸೈಬಲ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬ್ಯಾಂಕ್ ದೋಚಿರುವುದು ಹಾಗೂ ಹಗರಣಗಳೂ ಕೂಡ ಬೆಳಕಿಗೆ ಬಂದಿವೆ.
ಸರ್ಕಾರ ಯೋಜನೆಗಳು ಹಾಗೂ ಪರಿಹಾರ ನಿಧಿ ಹೆಸರಿನಲ್ಲಿಯೇ ಜನರನ್ನು ಹೆಚ್ಚು ವಂಚಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳಂತೆ ಜನರಿಗೆ ದೂರವಾಣಿ ಕರೆ ಅಥವಾ ಸಂದೇಶ ಅಥವಾ ಇಮೇಲ್ ಮಾಡುವ ವಂಚಕರು, ಗ್ರಾಹಕರ ಬ್ಯಾಂಕ್ ಖಾತೆ, ಸಂಖ್ಯೆ, ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಗಳ ಸಂಖ್ಯೆ ಪಡೆಯುತ್ತಾರೆ. ಹಾಗೆಯೇ ಜನರ ತಿಳಿವಳಿಕೆಗೆ ಬಾರದಂತೆಯೇ ಜನರಿಂದಲೇ ಸಿವಿವಿ ಹಾಗೂ ಓಟಿಪಿ ಸಂಖ್ಯೆಯನ್ನು ಪಡೆದುಕೊಂದು ವಂಚಿಸುತ್ತಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜನವರಿ ಹಾಗೂ ಏಪ್ರಿಲ್ ತಿಂಗಳವರೆಗೂ ಇಂತಹ 2,103 ಪ್ರಕರಣಗಳು ದಾಖಲಾಗಿವೆ. ಆದರೆ, ಮೇ ತಿಂಗಳಿನಲ್ಲಿ ದಾಖಲಾಗಿರುವ ಪ್ರಕರಣಗಳ ವರದಿ ಇನ್ನು ಬಿಡುಗಡೆಗೊಂಡಿಲ್ಲ. ಆದರೆ, 10 ಪ್ರಕರಣಗಳ ಪೈಕಿ 6 ಪ್ರಕರಣಗಳಲ್ಲಿ ಹಿರಿಯ ನಾಗರೀಕರೇ ವಂಚನೆಗೊಳಗಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಬ್ಯಾಂಕ್ ಖಾತೆ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಇತರೆ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳದಂತೆ ಬ್ಯಾಕ್ ಗಳು ಸೂಚನೆ ನೀಡಿವೆ. ಆದರೆ, ವ್ಯವಹಾರವು ಒಟಿಪಿ ಹಂತವನ್ನು ತಲುಪುವ ಮೊದಲು ಏನಾಗುತ್ತದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ವಂಚಕರಿಗೆ ಕಾರ್ಡ್ ಹಾಗೂ ಸಿವಿವಿ ಸಂಖ್ಯೆ ಹೇಗೆ ತಿಳಿಯುತ್ತದೆ ಎಂಬುದು ಎಲ್ಲರಿಗೂ ಆಶ್ಚರ್ಯ ಹುಟ್ಟಿಸುವ ವಿಚಾರವಾಗಿದೆ ಎಂದು ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಖಾಸಗಿ ಮೊಬೈಲ್ ನೆಟ್ವರ್ಕ್ ಕಂಪನಿಗಳು ವಂಚಕರಿಗೆ ಈ ಮಾಹಿತಿ ನೀಡುತ್ತಿವೆ ಎಂಬುದಾಗಿ ತಿಳಿದುಬಂದಿದೆ. ಇದು ಅತ್ಯಂತ ಅಪಾಯಕಾರಿಯಾದ ವಿಚಾರವಾಗಿದೆ. ಸಾಕಷ್ಟು ಹಿರಿಯ ನಾಗರೀಕರಿಗೆ ಎಟಿಎಂ ಕಾರ್ಡ್ ಮೂಲಕ ಹಣ ಯಾವ ರೀತಿ ತೆಗೆದುಕೊಳ್ಳುವುದು ಎಂಬುದೇ ತಿಳಿದಿರುವುದಿಲ್ಲ. ಆದರೂ ಆವರ ಕಾರ್ಡ್ ಗಳು ಬಳಕೆಯಲ್ಲಿರುತ್ತವೆ. ಹಿರಿಯ ನಾಗರೀಕರ ಬ್ಯಾಂಕ್ ಮಾಹಿತಿ ಹಾಗೂ ಕಾರ್ಡ್ ಗಳ ಸಿವಿವಿ ಸಂಖ್ಯೆಗಳು ಸೋರಿಕೆಯಾಗಿರುವುದೇ ಇದಕ್ಕೆ ಕಾರಣ. ಆದರೆ, ಇದೀಗ ಒಟಿಪಿ ಸಂಖ್ಯೆ ಹೇಗೆ ಸೋರಿಕೆಯಾಗುತ್ತಿದೆ ಎಂಬುದರ ಬಗ್ಗೆ ಬ್ಯಾಂಕ್ ಗಳು ಪರಿಶೀಲನೆ ನಡೆಸುತ್ತಿವೆ. ಇಂತಹ ಅಪರಾಧ ಕೃತ್ಯಗಳನ್ನು ಪರಿಹರಿಸಲು ಎಲ್ಲಾ ರೀತಿಯ ಕಾರ್ಯಗಳೂ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
Follow us on Social media