ಮಂಗಳೂರು : ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಲು ಬೈಕ್ ಅನ್ನು ಸೇತುವೆಯಲ್ಲಿ ನಿಲ್ಲಿಸಿ ನಾಪತ್ತೆಯಾದ ಯುವಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ.
ಮುಡಿಪು ಸಮೀಪದ ಕುರ್ನಾಡು ನಿವಾಸಿ ಪ್ರವೀಣ್ ಸಫಲ್ಯ(28) ಜೂ.9 ರ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದು , ಅವರ ಬೈಕ್ ಸೇತುವೆ ಮೇಲೆ ಪತ್ತೆಯಾಗಿತ್ತು. ಹೀಗಾಗಿ ಉಳ್ಳಾಲ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಯ ಯತ್ನ ನಡೆಸಿರಬಹುದೆಂದು ಶಂಕಿಸಲಾಗಿತ್ತು. ಅಲ್ಲದೆ ನದಿಯಲ್ಲಿ ಆತನಿಗಾಗಿ ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಮುಳುಗುತಜ್ಞರು ತೀವ್ರ ಶೋಧಕಾರ್ಯ ನಡೆಸುತ್ತಿದ್ದರು. ಹೀಗೆ ಎಲ್ಲರನ್ನು ಬೆಸ್ತು ಬೀಳಿಸಿದ ಯುವಕ ಇದೀಗ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ.
ಪ್ರವೀಣ್ ಸಫಲ್ಯ ಎಸ್.ಎಲ್.ಆರ್. ಲಿಮಿಟೆಡ್ ಕಂಪೆನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ಸಾಲಗಾರರ ಕಾಟ ತಾಳಲಾರದೆ ಬೈಕ್ ಸೇತುವೆ ಮೇಲೆ ನಿಲ್ಲಿಸಿ ಶಿವಮೊಗ್ಗಕ್ಕೆ ತೆರಳಿದ್ದರು ಎನ್ನಲಾಗುತ್ತಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Follow us on Social media