ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈಗಾಗಲೇ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷದ ಕಾಲ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ವಿತ್ತ ಸಚಿವಾಲಯವು, ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಂಪನ್ಮೂಲ ಕ್ರೋಡೀಕರಿಸಬೇಕಿದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಕೇಂದ್ರ ಸರ್ಕಾರ ಯಾವುದೇ ಹೊಸ ಯೋಜನೆಯನ್ನು ಘೋಷಣೆ ಮಾಡುವುದಿಲ್ಲ ಎಂದು ಹೇಳಿದೆ.
ಹೊಸ ಯೋಜನೆಗಳಿಗೆ ಹಣಕಾಸು ಅನುಮೋದನೆ ಕೋರಿ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು ಪ್ರಸ್ತಾವನೆ ಸಲ್ಲಿಸುವುದನ್ನು ನಿಲ್ಲಿಸಬೇಕು. ಕೊರೋನಾ ವೈರಸ್ ನೀಡಿರುವ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಳ್ಳಲು ಈಗಾಗಲೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮಾತ್ರ ಹಣಕಾಸಿನ ನೆರವು ಒದಗಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಮುಖವಾಗಿ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಗೆ ಅನುದಾನ ದೊರೆಯಲಿದ್ದು, ಉಳಿದೆಲ್ಲಾ ಯೋಜನೆಗಳಿಗೆ ಪ್ರಸ್ತುತ ಇರುವ ಅನುದಾನವನ್ನಷ್ಟೇ ಬಳಕೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ತಮ್ಮ ಪ್ರಸ್ತಾವನೆಯನ್ನು ಸ್ಥಗಿತಗೊಳಿಸಬೇಕು. ಹಣಕಾಸು ಇಲಾಖೆಯು ಯಾವ ಹೊಸ ಯೋಜನೆಗಳಿಗೂ ಅನುದಾನವನ್ನು ನೀಡುವುದಿಲ್ಲ.
ಕೊರೋನಾ ವೈರಸ್ ನೀಡಿರುವ ಆರ್ಥಿಕ ಆಘಾತದಿಂದ ದೇಶವನ್ನು ಮೇಲೆತ್ತಲು ಈಗಾಗಲೇ ಎಲ್ಲಾ ವರ್ಗಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ರೂ.20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಿದೆ. ಈ ವಿಶೇಷ ಆರ್ಥಿಕ ಪ್ಯಾಕೇಜ್ ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕ ಪ್ಯಾಕೇಜ್ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ.
ಕೃಷಿ ವಲಯ, ಉದ್ಯಮ ವಲಯ, ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ವಿಶೇಷ ಆರ್ಥಿಕ ಪ್ಯಾಕೇಜ್’ನ್ನು ಮೋದಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಂಪನ್ಮೂಲದ ಕ್ರೋಡೀಕರಣ ಮಾಡಬೇಕಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆ ಘೋಷಿಸದಿರಲು ನಿರ್ಧರಿಸಲಾಗಿದೆ. ಕೊರೋನಾ ವಿರುದ್ಧ ಹೋರಾಟಕ್ಕೂ ಅನುದಾನ ನೀಡಬೇಕಿದ್ದು, ಪ್ರಸಕ್ತ ವರ್ಷದಲ್ಲಿ ಹಣಕಾಸು ಪರಿಸ್ಥಿತಿಯನ್ನು ಕಟ್ಟುನಿಟ್ಟಾಗಿ ನಿಬಾಯಿಸಬೇಕಿದೆ ಎಂದು ತಿಳಿಸಿದೆ.
ದೇಶದಲ್ಲಿ ಈ ವರೆಗೂ 2,26,770 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಮಹಾಮಾರಿ ವೈರಸ್’ಗೆ ಸುಮಾರು 6,348 ಮಂದಿ ಸಾವನ್ನಪ್ಪಿದ್ದಾರೆ.
Follow us on Social media