ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು, ಟ್ರಾಕ್ಟರ್, ಇತರೆ ವಾಹನ ಹೊಂದಿರುವವರು ತಮ್ಮ ಕಾರ್ಡುಗಳನ್ನು ಕೂಡಲೇ ಹಿಂತಿರುಗಿಸಿ, ರದ್ದುಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಅರ್ಹ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ಸಮರ್ಪಕವಾಗಿ ತಲುಪಬೇಕು. ಜೊತೆಗೆ ಅನರ್ಹರು ಈ ಸೌಲಭ್ಯ ದುರುಪಯೋಗ ಪಡಿಸಿಕೊಳ್ಳದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಪ್ರಾರಂಭಕ್ಕೆ ಮೊದಲು 63 ಸಾವಿರ ಪಡಿತರ ಕಾರ್ಡುಗಳನ್ನು ರದ್ದುಪಡಿಸಲಾಗಿತ್ತು. ಈಗ ಮತ್ತೆ ಅನರ್ಹ ಮತ್ತು ನಕಲಿ ಪಡಿತರ ಚೀಟಿಗಳ ರದ್ದುಪಡಿಸಲು ಅಭಿಯಾನ ನಡೆಸುವಂತೆ ಸೂಚಿಸಿದರು. ರಾಜ್ಯದ ಬೊಕ್ಕಸಕ್ಕೆ ಆಗುವ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಅಭಿಯಾನ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆಹಾರ ಮತ್ತು ನಾಗರಿಕರ ಸರಬರಾಜು ನಿಗಮಕ್ಕೆ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಖರೀದಿಗೆ ರೈತರಿಗೆ ಹಣ ಪಾವತಿಸಲು ಬಾಕಿ ಇರುವ 240 ಕೋಟಿ ರೂ. ಆವರ್ತ ನಿಧಿಯಿಂದ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಡಿತರ ವಿತರಣೆ ಮಾಡಲಾಗಿದೆ. ಶೇ. 95ರಷ್ಟು ಪಡಿತರಚೀಟಿದಾರರು ಪಡಿತರ ಪಡೆದುಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆ ಅಡಿ 98,079 ಫಲಾನುಭವಿಗಳಿಗೆ 3 ಅನಿಲ ಸಿಲಿಂಡರುಗಳನ್ನು ಉಚಿತವಾಗಿ ವಿತರಿಸಲು ಕ್ರಮ ವಹಿಸಲಾಗಿದೆ.
ನಿಗಮದ 53 ಗೋದಾಮುಗಳು ಶಿಥಿಲಾವಸ್ಥೆಯಲ್ಲಿದ್ದು, 42 ಖಾಲಿ ನಿವೇಶನಗಳು ನಿಗಮದ ಒಡೆತನದಲ್ಲಿದೆ. ಈ ಸ್ಥಳಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ 95 ಗೋದಾಮುಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ..ಎಂ. ವಿಜಯಭಾಸ್ಕರ್, ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Follow us on Social media