ಬೆಂಗಳೂರು: ಶಾಸಕರ ಜೊತೆ ಮನೆಯಲ್ಲಿ ಊಟ ಮಾಡಿದ್ದು ನಿಜ.ಆದರೆ ಯಾವುದೇ ರೀತಿಯ ಬಂಡಾಯ ಚಟುವಟಿಕೆ ನಡೆಸಿಲ್ಲ ಇಂತಹ ಸಮಯದಲ್ಲಿ ಅಂತಹ ಕೆಲಸ ಮಾಡಲ್ಲ ನಮಗೂ ಜವಾಬ್ದಾರಿ ಇದೆ ಎಂದು ಶಾಸಕ ಉಮೇಶ್ ಕತ್ತಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಕತ್ತಿವರಸೆ ವಿಚಾರ ಸಂಬಂಧಿಸಿದಂತೆ ವೀಡಿಯೋ ಸಂದೇಶ ಬಿಡುಗಡೆ ಮಾಡಿರುವ ಉಮೇಶ್ ಕತ್ತಿ, ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಸ್ಥಳೀಯ ಊಟದ ಸಮಸ್ಯೆ ಕಾಡುತ್ತಿದೆ. ಹಾಗಾಗೀ ನಾವೆಲ್ಲಾ ನಮ್ಮ ಮನೆಯಲ್ಲಿ ಊಟಕ್ಕೆ ಸೇರಿದ್ದೆವು ಎಂದಿದ್ದಾರೆ.
ಕಳೆದ ಗುರುವಾರವೂ ಊಟಕ್ಕಾಗಿ ನಮ್ಮ ಮನೆಯಲ್ಲಿ ಅನೇಕ ಶಾಸಕರು ಭಾಗವಹಿಸಿದ್ದರು.ನಿನ್ನೆಯೂ ಸೇರಿದ್ದೆವು ಎಂದು ಶಾಸಕರು ಒಟ್ಟಾಗಿ ಉಮೇಶ್ ಕತ್ತಿ ಮನೆಯಲ್ಲಿ ಸಭೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.
ಈ ಮಧ್ಯೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ, ಕ್ಷೇತ್ರದ ಅನುದಾನದ ಹಂಚಿಕೆ ಸಂಬಂಧ ಸಮಸ್ಯೆ ಇದೆ. ಆದರೆ, ಇದು ಯಾವುದೇ ಬಂಡಾಯ ಅಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಉಮೇಶ್ ಕತ್ತಿ ಅವರ ಮನೆಯಲ್ಲಿ ಭೋಜನಕ್ಕಾಗಿ ಆಹ್ವಾನಿಸಲಾಗಿತ್ತು. ಅದಕ್ಕಾಗಿ ಸಂಜೆ ಊಟಕ್ಕೆ ತೆರಳಿದ್ದೆವು. ಕತ್ತಿಯವರ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಮನೆಗೆ ತೆರಳಿದ್ದೇವೆ. ಆಗ ನಾವಾಗಲೀ ಅಥವಾ ಕತ್ತಿಯವರಾಗಲಿ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಅವರು ತಿಳಿಸಿದ್ದಾರೆ.
Follow us on Social media