ಬೆಂಗಳೂರು : ಕೋಲಾರದ ಮಾಲೂರಿನಲ್ಲಿ ತಬ್ಲಿಘಿಗಳಿಂದ ಮತಾಂತರ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಯಾರೂ ಯಾರನ್ನಾದರೂ ಯಾವುದೇ ಧರ್ಮಕ್ಕೆ ಬೇಕಾದರೂ ಸೇರಿಸಿಕೊಳ್ಳಬಹುದು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಬೇಕಾದರೂ ಯಾವುದೇ ಧರ್ಮಕ್ಕೆ ಸೇರಬಹುದು. ಅದು ಅವರ ಹಕ್ಕು. ಮತಾಂತರ ಮಾಡುವ ವಿಚಾರದಲ್ಲಿ ಒತ್ತಾಯ ಇರಬಾರದಷ್ಟೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ದಿನದಿಂದ ದಿನಕ್ಕೆ ಕೊರೊನ ಪ್ರಕರಣಗಳು ಹೆಚ್ಚಾಗಲು ಸರ್ಕಾರದ ನೀತಿಯೇ ಕಾರಣ. ಜನರಿಗೆ ಇನ್ನೂ ಸಹ ಸಾಮಾಜಿಕ ಅಂತರದ ಜ್ಞಾನ ಸಂಪೂರ್ಣವಾಗಿ ಬಂದಿಲ್ಲ. ಸರ್ಕಾರ ಆತುರಾತುರವಾಗಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದು ಸರಿಯಲ್ಲ. ಲಾಕ್ ಡೌನ್ ಸಡಿಲಿಕೆಯೇ ಕೊರೊನಾ ಸೋಂಕು ಹೆಚ್ಚಲು ಕಾರಣ ಎಂದು ಆರೋಪಿಸಿದರು.
ಕೊರೊನಾ ಜತೆ ಜೀವಿಸುವುದು ಕಲಿಯಿರಿ ಎಂಬ ಕೇಂದ್ರದ ಹೇಳಿಕೆಗೆ ಕಿಡಿಕಾರಿದ ಸಿದ್ದರಾಮಯ್ಯ, ಕೊರೊನಾ ಜತೆ ಬದುಕಬೇಕು ಎನ್ನುವುದಲ್ಲ. ಸೋಂಕು ತಡೆಗೆ ಯಾವುದೇ ಮದ್ದು ಇಲ್ಲದಿರುವುದರಿಂದ ಆದಷ್ಟು ಬೇಗ ಅದನ್ನು ಕಂಡುಹಿಡಿಯುವ ಕೆಲಸ ಮಾಡಬೇಕು. ಪ್ರಪಂಚದ ಯಾವುದೇ ದೇಶ ಸಹ ಮದ್ದು ಕಂಡುಹಿಡಿದಿಲ್ಲ. ಹೀಗಾಗಿ ಮದ್ದು ಕಂಡುಹಿಡಿಯುವ ಕೆಲಸವನ್ನು ಕೇಂದ್ರ ಮಾಡಲಿ. ಆಗ ನಾವು ಕೊರೊನಾ ಜೊತೆ ಬದುಕುವುದನ್ನು ಕಲಿಯೋಣ ಎಂದು ಟೀಕಾಪ್ರಹಾರ ನಡೆಸಿದರು.
Follow us on Social media