ನವದೆಹಲಿ : ಗುಜರಾತ್, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಒಂದೇ ದಿನದಲ್ಲಿ ದೇಶದಲ್ಲಿ 3320 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರಂತೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 60,000 ಗಡಿಯತ್ತ ಸಾಗಿದೆ.
ಶುಕ್ರವಾರ ಒಂದೇ ದಿನ 3320 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59662ಕ್ಕೆ ತಲುಪಿದೆ.
ಮೇ.1 ರಿಂದ ಪ್ರತೀನಿತ್ಯ ಕನಿಷ್ಟ 2000ಕ್ಕಿಂತ ಹೆಚ್ಚು ಸೋಂಕು ದಾಖಲಾಗುವ ಬೆಳವಣಿಗೆ ಮುಂದುವರೆದಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 95 ಮಂದಿ ಸಾವನ್ನಪ್ಪಿದ್ದು, ಈವರೆಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 1981ಕ್ಕೆ ತಲುಪಿದೆ.
ಇನ್ನು 59662 ಮಂದಿ ಸೋಂಕಿತರ ಪೈಕಿ 17847 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ ಇದೀಗ 39834 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿರುವ ಮಹಾರಾಷ್ಟ್ರದಲ್ಲಿ ಶುಕ್ರವಾರ 1080 ಹೊಸ ಪ್ರಕರಣ, 37 ಸಾವು ದಾಖಲಾಗಿದೆ. ಉಳಿದಂತೆ ತಮಿಳುನಾಡಲ್ಲಿ 600 ಸೋಂಕು ಗುಜರಾತ್’ನಲ್ಲಿ 390 ಸೋಂಕು, ಮಧ್ಯಪ್ರದೇಶದಲಲಿ 89 ಸೋಂಕು ರಾಜಸ್ತಾನದಲ್ಲಿ 62 ಸೋಂಕು ದಾಖಲಾಗಿದೆ.
ಈ ನಡುವೆ ದೇಶದ ಮಹಾನಗರಗಳಲ್ಲಿ ಹೆಚ್ಚು ಸೋಂಕು ದಾಖಲಾಗುವ ಬೆಳವಣಿಗೆಯೂ ಮುಂದುವರೆದಿದೆ. ಶುಕ್ರವಾರ ಮುಂಬೈನಲ್ಲಿ 748, ಅಹಮದಾಬಾದ್’ನಲ್ಲಿ 269, ಪುಣೆಯಲ್ಲಿ 48, ಜೈಪುರದಲ್ಲಿ 26 ಹೊಸ ಸೋಂಕಿನ ಪ್ರಕರಣ ಬೆಳಕಿಗೆ ಬಂದಿದೆ.
Follow us on Social media