ಬೆಂಗಳೂರು : ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಎಂದು ನಿಟ್ಟುಸಿರು ಬಿಡುವಾಗಲೇ ರಾಜ್ಯದಲ್ಲಿ ಒಂದೇ ದಿನ ಏಕಾಏಕಿ 48 ಹೊಸ ಪ್ರಕರಣಗಳು ವರದಿಯಾಗಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಬೆಂಗಳೂರು ನಗರದ 7 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಬೆಳಗಾವಿಯಲ್ಲಿ 11 ಪ್ರಕರಣಗಳು ವರದಿಯಾಗಿವೆ. ದಾವಣಗೆರೆಯಲ್ಲಿ ಬರೋಬ್ಬರಿ 14 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಉತ್ತರ ಕನ್ನಡದ ಭಟ್ಕಳದಲ್ಲಿ 12 ಪ್ರಕರಣಗಳು ಪತ್ತೆಯಾಗಿವೆ. ಬಳ್ಳಾರಿಯಲ್ಲಿ 1 ಪ್ರಕರಣ ವರದಿಯಾಗಿದ್ದು ಸಂಜೆ ವೇಳೆಗೆ ಚಿತ್ರದುರ್ಗದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ ಭಟ್ಕಳದ 5 ತಿಂಗಳ ಹೆಣ್ಣು ಮಗು, 3 ವರ್ಷದ ಬಾಲಕಿ, ದಾವಣಗೆರೆಯ 8 ವರ್ಷದ ಬಾಲಕ, 13 ವರ್ಷದ ಬಾಲಕಿ, 3 ವರ್ಷದ ಬಾಲಕಿ, 9 ವರ್ಷದ ಬಾಲಕಿ, 10 ವರ್ಷದ ಬಾಲಕನೂ ಸೇರಿದ್ದಾರೆ.
ಬೆಂಗಳೂರಿನ ಪಾದರಾಯನಪುರದ 22, 19, 40 ಮತ್ತು 25 ವರ್ಷದ ವ್ಯಕ್ತಿಗಳಿಗೆ ಸೋಂಕು ಪತ್ತೆಯಾಗಿದೆ. ಉಳಿದಂತೆ 23 ವರ್ಷದ ವ್ಯಕ್ತಿ, 35 ವರ್ಷದ ಮಹಿಳೆ ಮತ್ತು 34 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಅದರ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ, 30 ಜನರು ಮೃತಪಟ್ಟಿದ್ದಾರೆ. 371 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Follow us on Social media