ಬೆಂಗಳೂರು : ಸರ್ಕಾರ ರೈತರಿಗೆ ಹೊಸದಾಗಿ ಬಡ್ಡಿ ರಹಿತ ಸಾಲ ಕೊಡಬೇಕು. ರೈತರು ಈಗಾಗಲೇ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು.ಬೇಡಿಕೆ ಈಡೇರಿಸದಿದ್ದರೆ ಮುಂದಿನ ಹೋರಾಟ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ
ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೊರೋನಾ ಪರಿಹಾರಕ್ಕಾಗಿ ಸರ್ಕಾರ ಪ್ರಕಟಿಸಿರುವ ಪರಿಹಾರ ಧನ ತೃಪ್ತಿದಾಯಕವಾಗಿಲ್ಲ.ಲಕ್ಷಾಂತರ ರೂ.ಖರ್ಚು ಮಾಡಿ ಹೂ ಬೆಳೆದ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂ.ಪರಿಹಾರ ಸಾಕಾಗುವುದಿಲ್ಲ. ಅಲ್ಲದೇ ನೇಕಾರರು, ಅಗಸ, ಸವಿತಾ ಆಟೋ, ಕ್ಯಾಬ್ ಚಾಲಕರನ್ನು ಮಾತ್ರ ಪರಿಹಾರದಡಿ ಸೇರಿಸಿ ಬಹುತೇಕ ಸಂಘಟಿತ ಅಸಂಘಟಿತ ಕಾರ್ಮಿಕರನ್ನೆಲ್ಲ ಕೈಬಿಡಲಾಗಿದೆ. ಕೈಬಿಟ್ಟಿರುವ ಎಲ್ಲಾ ಸಮುದಾಯಕ್ಕೂ ಸರ್ಕಾರ ಪರಿಹಾರ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.
ಇರುವ ಆರ್ಥಿಕ ಸ್ಥಿತಿಯಲ್ಲಿ ಕೊರೋನಾ ಪರಿಸ್ಥಿತಿಯನ್ನು ಸರ್ಕಾರ ಹೇಗೆ ನಿಭಾಯಿಸಬೇಕು ಎಂದು ಸಲಹೆ ಕೊಡಲು ಪ್ರತಿಪಕ್ಷ ಸಿದ್ಧವಿದೆ. ಇದಕ್ಕಾಗಿ ಸರ್ಕಾರ ಆದಷ್ಟು ಬೇಗ ವಿಶೇಷ ಅಧಿವೇಶನ ಕರೆಯಬೇಕು. ಅಧಿವೇಶನ ಕರೆದರೆ ಸೂಕ್ತ ಸಲಹೆ ಕೊಡುತ್ತೇವೆ ಎಂದರು.
ಕೇರಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಜನರಿಗೆ ದೊಡ್ಡ ಮೊತ್ತದ ಪರಿಹಾರ ಕೊಟ್ಟಿದ್ದಾರೆ. ರಾಜ್ಯದ ಕೊರೋನಾ ಪರಿಹಾರಕ್ಕಾಗಿ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಕೇಂದ್ರ ಸರ್ಕಾರದಿಂದ ದೊಡ್ಡಮೊತ್ತದ ಪ್ಯಾಕೇಜ್ ತರಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ನಡೆಸಬೇಕೆಂದು ಆಗ್ರಹಿಸಿದರು.
ಕೊರೋನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಪ್ರಧಾನಿ ಕೇರ್ ನಲ್ಲಿ 35 ಸಾವಿರ ಕೋಟಿ ರೂ.ನಲ್ಲಿನ ನಯಾ ಪೈಸೆಯೂ ರಾಜ್ಯಕ್ಕೆ ಬಂದಿಲ್ಲ. ರಾಜ್ಯದಿಂದ ಹೋಗಿರುವ ಹಣವನ್ನಾದರೂ ಕೇಂದ್ರ ನಮಗೆ ಕೊಡಬೇಕಿತ್ತು. ಇದೂ ಮಾಡಿಲ್ಲ.ಜನರ ಬಳಿ ಹಣವೇ ಇಲ್ಲ ಎಂದಮೇಲೆ ಖರೀದಿ ಮಾಡುವ ಶಕ್ತಿಯೂ ಇರುವುದಿಲ್ಲ. ಖರೀದಿ ಇಲ್ಲ ಎಂದಾದರೆ ಮಾರುಕಟ್ಟೆಯಲ್ಲಿ ಯಾವುದಕ್ಕೂ ಬೇಡಿಕೆ ಇರದು ಎಂದು ಸಲಹೆ ನೀಡಿದರು.
ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ಸೋಂಕು ಪರೀಕ್ಷೆ ಪ್ರಮಾಣ ಹೆಚ್ಚು ಮಾಡಿ ಪಿಪಿಇ ಕಿಟ್, ಟೆಸ್ಟಿಂಗ್ ಕಿಟ್ ಗಳ ಪೂರೈಕೆ ಇರಬೇಕು.ಜೂನ್, ಜುಲೈ ತಿಂಗಳಲ್ಲಿ ಸೋಂಕು ತೀವ್ರವಾಗುವ ಸಾಧ್ಯತೆ ಇದೆ ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಜಾಗ್ರತೆ ವಹಿಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
Follow us on Social media