ಮಂಗಳೂರು : ಫಸ್ಟ್ ನ್ಯೂರೋ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಮೂಲವನ್ನು ಪತ್ತೆ ಹಚ್ಚಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ ಮೂರು ಕೋರೋನಾ ಪ್ರಕರಣಗಳ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತದೊಂದಿಗೆ ತುರ್ತು ಸಭೆ ನಡೆಸಿದ ಅವರು ಈ ಆದೇಶ ನೀಡಿದರು.
ಈ ಬಗ್ಗೆ ಸಮಗ್ರ ತನಿಖೆ ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ನೀಡಬೇಕು ಎಂದ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ ನೀಡಿದರು. ಸೋಂಕಿನ ಮೂಲ ತನಿಖೆಗೆ ಉನ್ನತ ವೈದ್ಯಕೀಯ ತಂಡದ ನೆರವಿನೊಂದಿಗೆ ಸಮಗ್ರ ವರದಿಯನ್ನು ತಯಾರಿಸಿ ಸರಕಾರಕ್ಕೆ ಮಂಡಿಸಬೇಕೆಂದು ಅವರು ನಿರ್ದೇಶಿಸಿದರು. ಇದರಿಂದ ಕೊರೋನಾ ಎಲ್ಲಿಂದ ಆರಂಭವಾಯಿತು ಎಂಬ ಸಾರ್ವಜನಿಕ ಸಂಶಯ ನಿವಾರಣೆಯಾಗಲು ಸಾಧ್ಯವಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಮಾತನಾಡಿ, ಫಸ್ಟ್ ನ್ಯೂರೋ ಆಸ್ಪತ್ರೆಯ ವಿವಿಧ ರೋಗಿಗಳ ಸಂಪರ್ಕವನ್ನು ಈಗಾಗಲೇ ಪಡೆಯಲಾಗಿದೆ. ಈ ಬಗ್ಗೆ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಹೇಳಿದರು. ವೆನ್ಲಾಕ್ ಕೊರೋನಾ ಪ್ರಯೋಗಾಲಯದ ಬಗ್ಗೆ ಮಾಹಿತಿ ಒದಗಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಾ ಪ್ರಕರಣಗಳು ಬರುತ್ತಿರುವ ಹಿನ್ನೆಲೆಯಲ್ಲಿ ವರದಿ ವಿಳಂಬವಾಗಿದೆ. ಯಾವುದೇ ಕಾರಣಕ್ಕೂ ಪ್ರಯೋಗಾಲಯದ ಕಾರ್ಯಾಚರಣೆ ಸ್ಥಗಿತವಾಗಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವ ಕೋಟ, ಕೋರೋನಾ ನಿಯಂತ್ರಿಸಲು ಎಲ್ಲರೂ ಸಹಕಾರ ನೀಡಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದಂತೆ ಮನವಿ ಮಾಡಿಕೊಂಡರು.
Follow us on Social media