ನವದೆಹಲಿ: ಕೊರೋನಾ ಸೋಂಕು ಇನ್ನೇನು ನಿಯಂತ್ರಣಕ್ಕೆ ಬಂದೇ ಬಿಟ್ಟಿತು ಎಂಬ ಭರವಸೆಯಲ್ಲಿ ಕೇಂದ್ರ ಸರ್ಕಾರ ದೇಶವ್ಯಾಪಿ ಲಾಕ್”ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಮಂಗಳವಾರ ದೇಶದಲ್ಲಿ ಭಾರೀ ಕೊರೋನಾ ಸ್ಫೋಟ ಸಂಭವಿಸಿದೆ. ಒಂದೇ ದಿನ ದೇಶದಾದ್ಯಂದ 3,900 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 46,711ಕ್ಕೆ ಏರಿಕೆಯಾಗಿದೆ.
ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಇಂದು ಬೆಳಿಗ್ಗೆ 8ಗಂಟೆಯವರೆಗೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,900 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 194 ಮಂದಿ ಒಂದೇ ದಿನ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 1,583ಕ್ಕೆ ಏರಿಕೆಯಾಗಿದೆ. ಹೊಸ ಸೋಂಕು ಮತ್ತು ಸಾವಿನ ಪ್ರಮಾಣ ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ದಾಖಲಾಗಿದ್ದು ಇದೇ ಮೊದಲು.
ಮೇ.4ರಿಂದ ದೇಶದಾದ್ಯಂತ ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಬಹುತೇಕ ಚಟುವಟಿಕೆ ಮತ್ತು ಸೇವೆಗಳಿಗೆ, ಕೆಂಪು ವಲಯದಲ್ಲಿ ಸೀಮಿತ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅವಕಾಶ ಕೊಟ್ಟ ಬೆನ್ನಲ್ಲೇ ಈ ಆಘಾತಕಾರಿ ಅಂಕಿಅಂಶಗಳು ಬೆಳಕಿಗೆ ಬಂದಿದೆ. ಮತ್ತೊಂದೆಡೆ ದೇಶದಾದ್ಯಂತ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಾರ್ಮಿಕರು, ಉದ್ಯೋಗಿಗಳ ಆಂತರಿಕ ವಲಸೆ, ಮತ್ತೊಂದೆಡೆ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಇದು ದೇಶದಲ್ಲಿ ಮತ್ತೆ ಕೊರೋನಾ ಮೆಗಾಸ್ಫೋಟದ ಭೀತಿಯನ್ನು ಹುಟ್ಟುಹಾಕಿದೆ. ಇದೇ ವೇಳೆ ಕಳೆದ 24 ಗಂಟೆಗಳಲ್ಲಿ 1020 ಕೊರೋನಾ ಸೋಂಕಿತರು ಗುಣುಖರಾಗಿ ಬಿಡುಗಡೆಯಾಗಿದ್ದಾರೆ. ಈ ವರೆಗೆ 13,161 ಜನ ಗುಣಮುಖರಾಗಿದ್ದಾರೆ. ಗುಣ ಹೊಂದಿದವರ ಪ್ರಮಾಣ ಶೇ.27.41ಕ್ಕೂ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ದೇಶದಲ್ಲೇ ಅತೀ ಹೆಚ್ಚು ಸೋಂಕು ಮತ್ತು ಸಾವು ದಾಖಲಾಗಿರುವ ಟಾಪ್ 5 ರಾಜ್ಯಗಳಲ್ಲಿ ಮಂಗಳವಾರವೂ ಅದೇ ಕಥೆ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ ಮಂಗಳವಾರ 841 ಹೊಸ ಪ್ರಕರಣ, 34 ಸಾವು, ತಮಿಳುನಾಡಿನಲ್ಲಿ 500 ಕೇಸು, 02 ಸಾವು, ಗುಜರಾತ್ ರಾಜ್ಯದಲ್ಲಿ 441 ಪ್ರಕರಣ, 49 ಸಾವು ದಾಖಲಾಗಿದೆ.
ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮಂಗಳವಾರ ಒಂದೇ ದಿನ 206 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 5,000ಕ್ಕೆ ಏರಿಕೆಯಾಗಿದೆ.
Follow us on Social media