ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳನ್ನು ಮತ್ತೆ ಮುಂದೂಡಿಕೆ ಮಾಡಲಾಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಹೇಳಿದೆ.
ಯುಪಿಎಸ್ಸಿ ಈ ವರ್ಷದ ಕೇಂದ್ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಮತ್ತೆ ಮುಂದೂಡಿದೆ. ಈ ಬಗ್ಗೆ ಯುಪಿಎಸ್ಸಿ ಅಧ್ಯಕ್ಷ ಅರವಿಂದ ಸಕ್ಸೇನಾ ಅವರ ಅಧ್ಯಕ್ಷತೆಯಲ್ಲಿ ಆಯೋಗದ ಸಭೆ ಸೋಮವಾರ ಜರುಗಿತು. ಕೇಂದ್ರ ಸರ್ಕಾರದಿಂದ ಮುಂದಿನ ಸೂಚನೆ ಬರುವವರೆಗೂ ಪರೀಕ್ಷೆಗಳನ್ನು ಮುಂದೂಡಲು ಸಭೆ ತೀರ್ಮಾನಿಸಿತು. ಈ ಮೊದಲು ಪರೀಕ್ಷೆಯನ್ನು ಮೇ 31 ರಂದು ನಡೆಸಲು ನಿರ್ಧರಿಸಲಾಗಿತ್ತು.
ಕೇಂದ್ರ ಸರ್ಕಾರ ಲಾಕ್ಡೌನ್ ಅನ್ನು ಮೇ 4 ರಿಂದ ಎರಡು ವಾರಗಳವರೆಗೆ ಮತ್ತೆ ವಿಸ್ತರಿಸಿದ ನಂತರ ಯುಪಿಎಸ್ಸಿ ಈ ನಿರ್ಧಾರ ಕೈಗೊಂಡಿದೆ. ಮೂಲಗಳ ಪ್ರಕಾರ ಮೇ 20 ರೊಳಗೆ ಲಾಕ್ಡೌನ್ ಮೌಲ್ಯಮಾಪನ ಮಾಡಿದ ನಂತರ ದಿನಾಂಕದಂದು ಪರೀಕ್ಷೆಗೆ ಕರೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ -19 ಹರಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಅಂತಹ ದೊಡ್ಡ ಪ್ರಮಾಣದ ಪರೀಕ್ಷೆಯನ್ನು ನಡೆಸುವುದು ಕಾರ್ಯಸಾಧ್ಯವಲ್ಲ. ಪರೀಕ್ಷಾರ್ಥಿಗಳು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಪರೀಕ್ಷೆ ಸಂಬಂಧ ಪರೀಕ್ಷಾರ್ಥಿಗಳಿಗೆ 30 ದಿನಗಳ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ ಎಂದು ಯುಪಿಎಸ್ಸಿ ತಿಳಿಸಿದೆ. ಆಯೋಗವು ಈ ವಾರ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಬೇಕಾಗಿತ್ತು, ಆದರೆ ಪ್ರಸ್ತುತ ಕೊರೋನಾ ಬಿಕ್ಕಟ್ಟಿನ ದೃಷ್ಟಿಯಿಂದ ಪರೀಕ್ಷಾ ಪ್ರಕ್ರಿಯೆಯನ್ನು ಮುಂದೂಡಲು ಆಯೋಗ ನಿರ್ಧರಿಸಿತು.
Follow us on Social media