ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಮಾರಕ ಕೊರೋನಾ ವೈರಸ್ ಅಕ್ಷರಶಃ ಕಂಗೆಡಿಸಿದ್ದು, ನಿನ್ನೆ ಒಂದೇ ದಿನ ಅಮೆರಿಕದಲ್ಲಿ ಮತ್ತೆ 1500 ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಅಮೆರಿಕದಲ್ಲಿ ಕೋವಿಡ್-19 ವೈರಸ್ ಗೆ ಬಲಿಯಾದವರ ಸಂಖ್ಯೆ 44,000ಕ್ಕೆ ಏರಿಕೆಯಾಗಿದೆ.
ಚೀನಾದಿಂದ ಶುರುವಾದ ಕೊರೋನಾ ಅಟ್ಟಹಾಸ ಈಗ ಅಮೆರಿಕದಲ್ಲಿ ಬರೋಬ್ಬರಿ 44,000 ಜನರನ್ನು ಬಲಿ ಪಡೆದಿದೆ. ನಿನ್ನೆ ಒಂದೇ ದಿನ ವೈರಸ್ ಗೆ 1500 ಜನ ಬಲಿಯಾಗಿದ್ದಾರೆ. ಇನ್ನು ಅಮೆರಿಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 8,04,759ಕ್ಕೆ ಏರಿಕೆಯಾಗಿದೆ. ಈ ಮೂಲಕ ಜಗತ್ತಿನಲ್ಲೇ ಅತೀ ಹೆಚ್ಚು ಕೊರೋನಾ ಪ್ರಕರಣಗಳನ್ನು ಹೊಂದಿದ ದೇಶ ಎಂಬ ಕುಖ್ಯಾತಿಗೆ ಅಮೆರಿಕ ಒಳಗಾಗಿದೆ. ಇನ್ನೂ ಇಟಲಿ ಮತ್ತು ಫ್ರಾನ್ಸ್‌ನಲ್ಲೂ ಸಹ ಕೊರೋನಾ ಮರಣ ಮೃದಂಗ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಈ ಮಾರಕ ವೈರಸ್ ಗೆ ಜಗತ್ತಿನಾದ್ಯಂತ ಕೊರೋನಾ ವೈರಸ್ಗೆ 1,75,000 ಜನರು ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 25,37,000ಕ್ಕೆ ಏರಿಕೆಯಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow us on Social media