ಕಲಬುರಗಿ: ಕೊರೋನಾ ನಿಯಂತ್ರಿಸಲು ಜಾರಿಯಾಗಿದ್ದ ಲಾಕ್ ಡೌನ್ ಉಲ್ಲಂಘಿಸಿ ರಥೋತ್ಸವ ಮಾಡಿದ ಹಿನ್ನೆಲೆಯಲ್ಲಿ ಸಂಸ್ಥೆಯ ಟ್ರಸ್ಟ್ ಕಾರ್ಯದರ್ಶಿ ಗುಂಡಣ್ಣ ಬಾಳಿ ಸೇರಿ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಠಾಣೆ ಪೊಲೀಸರಿಂದ ರಾವೂರು ಗ್ರಾಮದ ಹದಿಮೂರು ಜನರನ್ನು ಬಂಧಿಸಲಾಗಿದೆ. ಇದೇ 16 ರಂದು ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ಮಠದ ರಥೋತ್ಸವವಿತ್ತು. ಈ ಹಿಂದೆ ರಥೋತ್ಸವ ಮಾಡೋದಿಲ್ಲ ಅಂತಾ ಮೊದಲು ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ನಂತ್ರ ಪೊಲೀಸರಿಗೆ ಮಾಹಿತಿ ನೀಡದೆ ಕದ್ದುಮುಚ್ಚಿ ರಥೋತ್ಸವ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಾಡಿ ಠಾಣೆ ಪೊಲೀಸರು, ಟ್ರಸ್ಟ್ ಕಾರ್ಯದರ್ಶಿ ಗುಂಡಣ್ಣ ಬಾಳಿ ಸೇರಿದಂತೆ ರಾವೂರ್ ಗ್ರಾಮದ 13 ಜನರನ್ನು ಬಂಧಿಸಿದ್ದಾರೆ.
ಇನ್ನು ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೊರೋನಾ ಸೋಂಕು ತಗುಲಿದೆ. ತಮ್ಮೂರಿನ ಪಕ್ಕದಲ್ಲಿ ಕೊರೋನಾ ಬಂದಿದ್ದರು ಜನ ಎಚ್ಚೆತ್ತುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸಿದ್ದರು, ಜಿಲ್ಲೆಯಲ್ಲಿ ಇದೂವರೆಗೂ ಮೂವರು ಕೊರೋನಾಗೆ ಬಲಿಯಾಗಿದ್ದು, ಹದಿನೆಂಟು ಜನರಲ್ಲಿ ಸೋಂಕು ದೃಢವಾಗಿದೆ. ಅಲ್ಲದೆ, ಜಿಲ್ಲೆಯನ್ನು ರೆಡ್ ಜೋನ್ ಎಂದು ಘೋಷಿಸಲಾಗಿದೆ. ಆದರೂ, ನೂರಾರು ಜನ ಸೇರಿ ರಥೋತ್ಸವ ನೆರವೇರಿಸುವ ಮೂಲಕ ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿದ್ದರು.
ಪಿಎಸ್ಐ ತಲೆದಂಡ
ಈ ಹಿಂದೆ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ರಥೋತ್ಸವ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಾಡಿ ಪಿಎಸ್ ಐ ವಿಜಯಕುಮಾರ ಬಾವಗಿ ಅವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೆ ರಥೋತ್ಸವ ನಡೆಸಿದ ದೇವಸ್ಥಾನ ಸಮಿತಿಯ 20 ಜನರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.