ಬೆಂಗಳೂರು: ಕೊರೊನಾ ನಿಯಂತ್ರಣದ ಹೋರಾಟದ ನಡುವೆಯೇ ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸಿರುವುದು ಹಿರಿಯ ಸಚಿವ ವಿ. ಸೋಮಣ್ಣ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಹಿರಿಯ ಸಚಿವರಾಗಿರುವ ತಮ್ಮಿಂದ ಮೈಸೂರು ಉಸ್ತುವಾರಿಯನ್ನು ಕಸಿದುಕೊಂಡು ವಲಸಿಗ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ನೀಡಿರುವುದರಿಂದ ಅವರು ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು, ತಮಗೆ ಈಗ ಉಳಿದಿರುವ ಕೊಡಗು ಉಸ್ತುವಾರಿಯನ್ನೂ ಯಾರಿಗಾದರೂ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೇರವಾಗಿಯೇ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಬದಲಾದ ಲೆಕ್ಕಾಚಾರ: ಉಸ್ತುವಾರಿ ಸಚಿವರ ಬದಲಾವಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನ ಮಾಡಿದಾಗ ಸೋಮಣ್ಣ ಅವರಿಗೆ ಮೈಸೂರು ಜಿಲ್ಲೆ ಉಳಿಸಿಕೊಂಡು ಕೊಡಗು ಜಿಲ್ಲೆಯನ್ನು ಆಹಾರ ಸಚಿವ ಗೋಪಾಲಯ್ಯ ಅವರಿಗೆ ನೀಡುವುದು, ಈಗ ಮೈಸೂರು ಉಸ್ತುವಾರಿ ಪಡೆದಿರುವ ಎಸ್.ಟಿ. ಸೋಮಶೇಖರ್ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ನೀಡಲು ತೀರ್ಮಾನಿಸಲಾಗಿತ್ತು ಎನ್ನಲಾಗಿದೆ.
ಆದರೆ, ಸಂಜೆ ಹೊತ್ತಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಹಸ್ತಕ್ಷೇಪದಿಂದ ಸೋಮಣ್ಣ ಅವರಿಂದ ಮೈಸೂರು ಉಸ್ತುವಾರಿಯನ್ನು ಬದಾಯಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ತಮಗೆ ಮೈಸೂರು ಉಸ್ತುವಾರಿ ಕೈತಪ್ಪಿರುವುದರಿಂದ ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೊಡಗು ಉಸ್ತುವಾರಿಯನ್ನೂ ಯಾರಿಗಾದರೂ ಕೊಡಿ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದ್ದು, ಅವರನ್ನು ಸಮಾಧಾನ ಪಡಿಸಲು ಹಾಸನ ಅಥವಾ ತುಮಕೂರು ಉಸ್ತುವಾರಿ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು ಆದರೆ, ಸೋಮಣ್ಣ ಅದನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಂತರಿಕ ಸಂಘರ್ಷಕ್ಕೆ ಸಿಗದ ಅವಕಾಶ:
ಬೆಳಗಾವಿ ಜಿಲ್ಲಾ ಉಸ್ತುವಾರಿ ನೀಡುವ ವಿಚಾರದಲ್ಲಿ ಜಿಲ್ಲಾ ಬಿಜೆಪಿ ನಾಯಕರ ನಡುವಿನ ಮುಸುಕಿನ ಗುದ್ದಾಟದಿಂದ ರಮೇಶ್ ಜಾರಕಿಹೊಳಿಗೆ ಉಸ್ತುವಾರಿ ಕೈ ತಪ್ಪುವಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಅವರು ಉಸ್ತುವಾರಿ ವಹಿಸಿಕೊಂಡರೆ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಇತರ ನಾಯಕರು ಸಹಕಾರ ನೀಡದಿರುವುದರಿಂದ ಜಿಲ್ಲೆಯಲ್ಲಿ ಆಂತರಿಕ ಸಂಘರ್ಷಕ್ಕೆ ಕಾರಣವಾಗುತ್ತದೆ ಎನ್ನುವ ಕಾರಣಕ್ಕೆ ಜಗದೀಶ್ ಶೆಟ್ಟರ್ ಅವರನ್ನೇ ಮುಂದುವರೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಲಕ್ಷ್ಮಣ ಸವದಿ ಅವರಿಗೆ ಉಸ್ತುವಾರಿ ನೀಡುವುದಕ್ಕೆ ಉಮೇಶ್ ಕತ್ತಿ ಹಾಗೂ ರಮೇಶ್ ಜಾರಕಿಹೊಳಿ ಅವರ ವಿರೋಧ ಇರುವ ಕಾರಣಕ್ಕೆ ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ ಜಿಲ್ಲಾ ಉಸ್ತುವಾರಿ ಸಿಗದೇ ಜಗದೀಶ್ ಶೆಟ್ಟರ್ ಅವರೇ ಮುಂದುವರೆಯುವಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
Follow us on Social media