ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 40 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 1035 ಹೊಸ ಪ್ರಕರಣಗಳು ವರದಿಯಾಗಿದೆ. ಇದು ಭಾರತದಲ್ಲಿ ಸೋಂಕು ಕಾಣಿಸಿಕೊಂಡ ನಂತರ ನಿನ್ನೆ ಕಂಡುಬಂದ ಅತಿಹೆಚ್ಚು ಪ್ರಕರಣವಾಗಿದೆ.
ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 7 ಸಾವಿರದ 447ಕ್ಕೇರಿದ್ದು ಅವರಲ್ಲಿ 6 ಸಾವಿರದ 565 ಸೋಂಕಿತರು, 643 ಮಂದಿ ಗುಣಮುಖ ಹೊಂದಿದವರು ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರು ಮತ್ತು ಇನ್ನು ಕೆಲವರು ವಲಸೆ ಹೋದವರು ಹಾಗೂ 239 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶ ಹೇಳುತ್ತದೆ.
ಜಾರ್ಖಂಡ್ ನಲ್ಲಿ 3 ಹೊಸ ಕೇಸುಗಳು ಪತ್ತೆಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 17ಕ್ಕೇರಿದೆ.
ಭಾರತದಲ್ಲಿ ಒಡಿಶಾ ನಂತರ ಇದೀಗ ಪಂಜಾಬ್ ಸರ್ಕಾರ ಲಾಕ್ ಡೌನ್ ನ್ನು ಮೇ 1ರವರೆಗೆ ವಿಸ್ತರಿಸಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯ ಹಂತಕ್ಕೆ ತಲುಪಲು ಆರಂಭವಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಮರಿಂದರ್ ನೇತೃತ್ವದ ಸರ್ಕಾರ ಈ ಕ್ರಮ ಕೈಗೊಂಡಿದೆ.
ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ 5 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಬಿಹಾರದಲ್ಲಿ ಸೋಂಕಿತ 60 ವ್ಯಕ್ತಿಗಳಲ್ಲಿ 23 ಮಂದಿ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಆದರೆ ಆರೋಗ್ಯ ಸಚಿವಾಲಯ ಹೇಳುವ ಪ್ರಕಾರ ದೇಶದಲ್ಲಿ ಕೊರೋನಾ ಸೋಂಕು ಇನ್ನೂ ಮೂರನೇ ಹಂತ ತಲುಪಿಲ್ಲ.
Source : ANI
Follow us on Social media