Breaking News

ಮನೆ ಬಾಗಿಲಿಗೆ ಬರಲಿದೆ ದೇವಸ್ಥಾನಗಳ ಪ್ರಸಾದ: ತರಿಸಿಕೊಳ್ಳಲು ಏನು ಮಾಡಬೇಕು?

ಬೆಂಗಳೂರು: ಸಾಮಾನ್ಯವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅಲ್ಲಿಂದ ದೇವರ ಪ್ರಸಾದವನ್ನು ಖರೀದಿಸಿ, ಬಂಧು-ಬಳಗ ಹಾಗೂ ನೆರೆಹೊರೆಯವರಿಗೆ ವಿತರಿಸುವುದು ಸಾಮಾನ್ಯ. ಇದು ಮೊದಲಿನಿಂದಲೂ ನಡೆದುಕೊಂಡುಬಂದಿದೆ. ದೂರದ ದೇವಸ್ಥಾನಗಳಿಗೆ ಹೋಗುವವರಿಗೆ, ‘ಬರುತ್ತಾ ಸ್ವಲ್ಪ ಪ್ರಸಾದ ನಮಗೂ ತೆಗೆದುಕೊಂಡು ಬನ್ನಿ’ ಎಂದು ಮನವಿ ಮಾಡುವವರೂ ಇದ್ದಾರೆ. ಆದರೆ ಇನ್ನು ಮುಂದೆ ಕರ್ನಾಟಕದ 14 ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರಿಗೆ ವಿತರಿಸುವ ಪ್ರಸಾದವು ನಿಮ್ಮ ಬಾಗಿಲಿಗೇ ಬರಲಿದೆ. ದೇಗುಲದಿಂದ ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ, ಬಿಲ್ವಪತ್ರೆ, ಕುಂಕುಮ, ಹೂವಿನ ಪ್ರಸಾದವನ್ನು ಭಕ್ತರು ತರಿಸಿಕೊಳ್ಳಬಹುದು. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇಗುಲ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇಗುಲಗಳ ಪ್ರಸಾದ ಆನ್​ಲೈನ್ ಮೂಲಕ ವಿತರಿಸುವ ‘ಇ-ಪ್ರಸಾದ (E-prasada) ಕಾರ್ಯಕ್ರಮಕ್ಕೆ ಗುರುವಾರ ಮುಜರಾಯಿ ‌ಸಚಿವ ರಾಮಲಿಂಗಾರೆಡ್ಡಿ ಶಾಂತಿನಗರದ ಮುಖ್ಯ ಕಚೇರಿಯಲ್ಲಿ ಚಾಲನೆ ನೀಡಿದರು.

ಯಾವ್ಯಾವ ದೇಗುಲಗಳ ಪ್ರಸಾದ ಸಿಗುತ್ತೆ?

ಪ್ರಾಯೋಗಿಕವಾಗಿ ರಾಜ್ಯದ 14 ಪ್ರಮುಖ ದೇವಾಲಯಗಳ ಪ್ರಸಾದವನ್ನು ಭಕ್ತರು Cse – e Governance ಮೂಲಕ ಪ್ರಸಾದ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಸೇರಿದಂತೆ ಒಟ್ಟು- 14 ದೇವಾಲಯದ ಪ್ರಸಾದವನ್ನು ಮನೆಗೆ ತರಿಸಿಕೊಳ್ಳಬಹುದು.

ಯಾವೆಲ್ಲ ಪ್ರಸಾದಗಳು ಸಿಗಲಿವೆ?
ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ,ಭಸ್ಮ,ಬಿಲ್ವಪತ್ರೆ, ಕುಂಕುಮ, ಹೂವು ಸೇರಿದಂತೆ ಆಯಾ ದೇವಸ್ಥಾನಗಳ ಪ್ರಮುಖ ಪ್ರಸಾದವನ್ನು ಭಕ್ತರು ತರಿಸಿಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ದೂರದ ದೇವಸ್ಥಾನಗಳಿಗೆ ಹೋಗಿ, ಜನರ ದಟ್ಟಣೆಯ ನಡುವೆ ದೇವರ ದರ್ಶನ ಪಡೆಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿ ಪ್ರಸಾದ ಪಡೆಯಲು ಕಷ್ಟವಾಗುವ ಕಾರಣ ಭಕ್ತರ ಅನುಕೂಲಕ್ಕಾಗಿ ಮುಜರಾಯಿ ಇಲಾಖೆ ಹೊಸ ಪ್ರಯೋಗ ನಡೆಸಿದೆ.

ಆನ್​ಲೈನ್​ನಲ್ಲಿ ಪ್ರಸಾದ ತರಿಸಿಕೊಳ್ಳುವುದು ಹೇಗೆ?

ಪ್ರಸಾದವನ್ನು ತರಿಸಿಕೊಳ್ಳಲು ಇಚ್ಛಿಸುವ ಭಕ್ತರು ಮುಜರಾಯಿ ಇಲಾಖೆಯ ಅಧಿಕೃತ ವೆಬ್​ಸೈಟ್ csc.devalayas.com ಕ್ಲಿಕ್ ಮಾಡಿ. ಅಲ್ಲಿ ಬಲಭಾಗದಲ್ಲಿ ಮೇಲ್ಗಡೆ ಇರುವ Login With Digital Seva connect ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಯೂಸರ್​ನೇಮ್ ಅಥವಾ ಇ ಮೇಲ್ ನಮೂದಿಸಿ ಪಾಸ್​​ವರ್ಡ್ ನಮೂದಿಸಬೇಕು. ಒಂದು ವೇಳೆ ಡಿಜಿಟಲ್ ಸೇವಾ ಕನೆಕ್ಟ್​ಗೆ ಈವರೆಗೆ ನೋಂದಾಯಿಸಿಕೊಂಡಿಲ್ಲದೇ ಇದ್ದಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಲಾಗಿನ್ ಕ್ರೆಡೆನ್ಶಿಯಲ್​​ಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಪೋರ್ಟಲ್​​ಗೆ ಲಾಗಿನ್ ಆದ ನಂತರ ನಮಗೆ ಬೇಕಾದ ದೇಗುಲವನ್ನು ಆಯ್ಕೆ ಮಾಡಿ ಪ್ರಸಾದವನ್ನು ಆಯ್ಕೆ ಮಾಡಬೇಕು. ಪಾವತಿ ಮಾಡಿದ ನಂತರ ಕಾರ್ಟ್​​ನಲ್ಲಿ ನಿಮ್ಮ ಆರ್ಡರ್ ಡಿಸ್​​ಪ್ಲೇ ಆಗುತ್ತದೆ.

ಆನ್​ಲೈನ್​ನಲ್ಲಿ ಪ್ರಸಾದ ಸಿಗುವ 14 ದೇಗುಲಗಳಿವು…
ಬೆಂಗಳೂರು ಜಯನಗರದ ಶ್ರೀವಿನಾಯಕಸ್ವಾಮಿ ದೇವಾಲಯ, ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ, ಮಂಡ್ಯದ ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ, ಮೈಸೂರು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ಕೋಲಾರದ ಮಾಲೂರಿನ ಶ್ರೀ ಪುಸನ್ನ ವೆಂಕಟರಮಣ ಸ್ವಾಮಿ ದೇವಾಲಯ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ, ಬೀದರ್‌ನ ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೆಳಗಾವಿ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ದಕ್ಷಿಣ ಕನ್ನಡದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನ, ವಿಜಯನಗರದ ಹೂವಿನಹಡಗಲಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಕೊಪ್ಪಳದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಾಲಯ, ಕಲಬುರಗಿಯ ಗಾಣಗಾಪುರದ ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ ಇವುಗಳ ಪ್ರಸಾದ ಆನ್​ಲೈನ್​ನಲ್ಲಿ ಸಿಗಲಿದೆ.

ಇ-ಪ್ರಸಾದ ಯೋಜನೆಯಿಂದ ಯಾರಿಗೆಲ್ಲಾ ಉಪಯೋಗ?
ಮುಖ್ಯವಾಗಿ ಬಹುತೇಕ ಜನರಿಗೆ ರಾಜ್ಯದ ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುವ ಆಸೆ ಇರುತ್ತದೆ. ಆದರೆ ಅದು ವೃದ್ಧಾಪ್ಯದಲ್ಲಿ ಕೆಲವರಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಇಂತಹ ಭಕ್ತರು ಮನೆಯಲ್ಲೇ ಕುಳಿತು ತಮಗಿಷ್ಟವಾದ ದೇವಸ್ಥಾನದ ಪ್ರಸಾದವನ್ನು ತರಿಸಿಕೊಳ್ಳುಬಹುದು. ವೃದ್ಧರು ಮಾತ್ರವಲ್ಲದೆ ಕೆಲ ಅಂಗವಿಕಲರು, ನಡೆಯಲು ಸಾಧ್ಯವಾಗದೇ ಇರುವವರು, ಅಂದರು ಹೀಗೆ ಹಲವರಿಗೆ ಈ ಸೇವೆ ತುಂಬಾ ಉಪಯೋಗವಾಗಲಿದೆ. ಇನ್ನು ಪುಟ್ಟ ಮಕ್ಕಳಿರುವ ಪೋಷಕರು, ಮನೆಯಿಂದ ಹೊರಬರಲಾಗದ ಗರ್ಭಿಣಿಯರು ಈ ಸೇವೆಯ ಮೂಲಕ ಪ್ರಸಾದ ಬುಕ್ ಮಾಡಿಕೊಳ್ಳಲು ಸಹಕಾರಿಯಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×