ಮಂಗಳೂರು: ಆನ್ಲೈನ್ ವಂಚನೆಗಾಗಿ ಬಡ ಜನರ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ತಹಶೀಲ್ದಾರ್ ಗಲ್ಲಿಯ ಅವಿನಾಶ್ ಸುತಾರ್ (28), ರಾಮದೇವ ಗಲ್ಲಿಯ ಅನೂಪ್ ಕಾರೇಕರ್ (42)ಬಂಧಿತ ಆರೋಪಿಗಳು.
ದಕ್ಷಿಣ ಕನ್ನಡ ಸೈಬರ್ ಕ್ರೈಂ ಪ್ರಕರಣದ ತನಿಖೆ ವೇಳೆ ಆರೋಪಿಗಳ ಖತರ್ನಾಕ್ ಪ್ಲ್ಯಾನ್ ಬೆಳಕಿಗೆ ಬಂದಿದ್ದು, ಮುಗ್ದ ಜನರ ಬ್ಯಾಂಕ್ ಖಾತೆಯೇ ಇವರಿಗೆ ಖಜಾನೆಯಾಗಿದೆ. ಆರೋಪಿಗಳು ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯಲು ಹೇಳುತ್ತಾರೆ. ಬಳಿಕ, ಆರೋಪಿಗಳು ಆ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆದುಕೊಂಡು, ಆನ್ ಲೈನ್ ಬ್ಯುಸಿನೆಸ್ ಮಾಡುವುದಾಗಿ ಹೇಳುತ್ತಿದ್ದರು. ಬಳಿಕ ಮುಗ್ದರ ಬ್ಯಾಂಕ್ ಖಾತೆ ಮಾಹಿತಿಯನ್ನು ಸೈಬರ್ ವಂಚಕರ ಕೈಗಿಡುತ್ತಿದ್ದರು.
ಸೈಬರ್ ವಂಚಕರು ಈ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡು, ಶ್ರೀಮಂತ ಜನರಿಗೆ ವಿಡಿಯೊ ಕಾಲ್, ಡಿಜಿಟೆಲ್ ಅರೆಸ್ಟ್ ಸೇರಿದಂತೆ ಹಲವು ವಿಧಾನಗಳಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಬಳಿಕ, ವಂಚಕರ ಜಾಲಕ್ಕೆ ಸಿಲುಕಿದವರ ಕಡೆಯಿಂದ ಮುಗ್ದ ಜನರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸುತ್ತಾರೆ.
ಪುತ್ತೂರಿನ ರಾಧಾಕೃಷ್ಣ ನಾಯಕ್ ಎಂಬುವವರಿಗೆ ಸೈಬರ್ ವಂಚಕರು ವಿಡಿಯೊ ಕಾಲ್ ಮಾಡಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಿಮ್ಮನ್ನ ಡಿಜಿಟಲ್ ಅರೆಸ್ಟ್ ಮಾಡುತ್ತೇವೆ ಎಂದು ಹೆದರಿಸಿದ್ದಾರೆ. ಬಳಿಕ, 40 ಲಕ್ಷ ರೂಪಾಯಿ ಹಣವನ್ನ ಆರ್ಟಿಜಿಎಸ್ ಮೂಲಕ ಪಡೆದಿದ್ದಾರೆ. ಕೆಲವು ದಿನಗಳ ಬಳಿಕ ಅನುಮಾನಗೊಂಡ ರಾಧಾಕೃಷ್ಣರವರು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ವೇಳೆ ಬೆಳಗಾವಿಯ ಯಾರದ್ದೋ ಖಾತೆಗೆ ಹಣ ವರ್ಗಾವಣೆಗೊಂಡಿರುವುದು ತಿಳಿದಿದೆ.
ಬಂಧಿತ ಆರೋಪಿಗಳು ಸೈಬರ್ ವಂಚರೊಂದಿಗೆ ಟೆಲಿಗ್ರಾಂ ಮೂಲಕ ಸಂಪರ್ಕ ಸಾಧಿಸಿ ವ್ಯವಹಾರ ನಡೆಸುತ್ತಿದ್ದರು. ಆರೋಪಿಗಳು ಕೇವಲ ಕಮಿಷನ್ ಆಸೆಗಾಗಿ ಜನರ ಬ್ಯಾಂಕ್ ಖಾತೆಗಳನ್ನ ಉತ್ತರ ಭಾರತದವರಿಗೆ ನೀಡುತ್ತಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಅನೇಕ ಜನರು ತಮ್ಮ ಖಾತೆಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಸೈಬರ್ ವಂಚನೆ ಪ್ರಕರಣಕ್ಕೆ ಜಾರ್ಖಂಡ್ ‘ಜಾಮತಾರಾ’ವರೆಗೂ ನಂಟು ಇದೆ ಎಂಬುವುದನ್ನ ಬಾಯಿ ಬಿಟ್ಟಿದ್ದಾರೆ.
Follow us on Social media