ನವದೆಹಲಿ : ಒಲಿಂಪಿಕ್ ಬೆಳ್ಳಿ ವಿಜೇತ ಮತ್ತು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಅವರನ್ನು ವರ್ಷದ ಬಿಬಿಸಿ ಭಾರತೀಯ ಕ್ರೀಡಾಪಟು ಎಂದು ಆಯ್ಕೆ ಮಾಡಲಾಗಿದೆ. ಪಿಟಿ ಉಷಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿದೆ.
ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಭಾನುವಾರ ರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ ವಿಜೇತ ಸಿಂಧು ಹೆಸರನ್ನು ಘೋಷಿಸಿದರು. ಬಿಬಿಸಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಪ್ರಾರಂಭಿಸಿದೆ. ಅಂತಿಮ ಸುತ್ತಿಗೆ ದುತಿ ಚಂದ್, ಆರು ಬಾರಿ ವಿಶ್ವ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್, ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ವಿನೇಶ್ ಫೋಗಾಟ್, ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಮಾನ್ಸಿ ಜೋಶಿ ಸ್ಪರ್ಧೆಯಲ್ಲಿದ್ದರು.
ಸಿಂಧು 2019 ರಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದರು ಮತ್ತು ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಪಟು (ಪುರುಷ ಅಥವಾ ಸ್ತ್ರೀ) ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬಿಬಿಸಿ ಪ್ರಶಸ್ತಿಯ ಬಗ್ಗೆ ಮಾತನಾಡಿದ ಸಿಂಧು,”ನಾನು ವರ್ಷದ ಬಿಬಿಸಿ ಭಾರತೀಯ ಕ್ರೀಡಾಪಟು ಪ್ರಶಸ್ತಿ ಸಂದಿರುವುದು ಖುಷಿ ನೀಡಿದೆ. ಈ ಅದ್ಭುತ ಪ್ರಶಸ್ತಿ ನೀಡಿದ್ದಕ್ಕಾಗಿ ನಾನು ಬಿಬಿಸಿ ಇಂಡಿಯಾಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನನ್ನ ಅಭಿಮಾನಿಗಳಿಗೂ ಧನ್ಯವಾದ ಅರ್ಪಿಸುತ್ತೇನೆ” ಎಂದಿದ್ದಾರೆ.
ಸಿಂಧು ಐದು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಹೊಂದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Source : UNI
Follow us on Social media