ಢಾಕಾ : ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ ತಮೀಮ್ ಇಕ್ಬಾಲ್ ಅವರು ವೇಗಿ ಮಶ್ರಾಫೆ ಮೊರ್ತಾಜಾ ಅವರ ಸ್ಥಾನಕ್ಕೆ ಹೆಸರಿಸಲಾಗಿದೆ.
ಐದು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದ ಮಶ್ರಾಫೆ ಮೊರ್ತಾಜ ಅವರು ಕಳೆದ ವಾರ ಜಿಂಬಾಬ್ವೆ ವಿರುದ್ಧ ಮೂರನೇ ಹಾಗೂ ಕೊನೆಯ ಪಂದ್ಯದ ಬಳಿಕ ತಮ್ಮ ನಾಯಕತ್ವ ಸ್ಥಾನದಿಂದ ಕೆಳಗೆ ಇಳಿದರು.
“ಬಾಂಗ್ಲಾದೇಶ ಏಕದಿನ ತಂಡದ ನೂತನ ನಾಯಕನಾಗಿ ತಮೀಮ್ ಇಕ್ಬಾಲ್ ಅವರನ್ನು ನೇಮಿಸಲಾಗಿದೆ,’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಅವರು ನಿರ್ದೇಶಕರ ಸಾಮಾನ್ಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
“ತಮೀಮ್ ಇಕ್ಬಾಲ್ ಅವರಿಗೆ ಅಲ್ಪ ಅವಧಿಯ ಮಟ್ಟಿಗೆ ನಾಯಕತ್ವ ಸ್ಥಾನ ನೀಡಲಾಗಿದ್ದು, ಮುಂದಿನ ವರ್ಷ ಬೇರೆ ಆಟಗಾರನನ್ನು ಗುರುತಿಸಿ ನಾಯಕತ್ವದ ಹೊಣೆ ನೀಡಲಾಗುವುದು. ಆದರೆ, ಅಂತಿಮವಾಗಿ ನಾವು ಅಲ್ಪಾವಧಿಗೆ ತಂಡದ ನಾಯಕತ್ವವನ್ನು ತಮೀಮ್ಗೆ ನೀಡಲು ನಿರ್ಧರಿಸಿದ್ದೇವೆ. ಇವರೇ ದೀರ್ಘಾವಧಿ ನಾಯಕನಾಗಿ ಮುಂದುವರಿಯಲಿದ್ದಾರೆಂಬ ನಂಬಿಕೆ ಇದೆ,’ ಎಂದು ಹೇಳಿದರು.
ಕಳೆದ ವರ್ಷ ಮಶ್ರಾಫೆ ಮೊರ್ತಾಜಾ ಅವರು ಗಾಯದಿಂದಾಗಿ ತಮೀಮ್ ಇಕ್ಬಾಲ್ ಅವರು ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಸರಣಿಯ ಎಲ್ಲ ಮೂರು ಪಂದ್ಯಗಳಲ್ಲಿ ಬಾಂಗ್ಲಾ ಸೋಲು ಅನುಭವಿಸಿತ್ತು.