ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಆಟೋ ರಿಕ್ಷಾಗಳ ಪ್ರಯಾಣ ದರವನ್ನು ನವಂಬರ್ 15 ರಿಂದ ಅನ್ವಯವಾಗುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪರಿಷ್ಕರಿಸಿದೆ.
1.5 ಕಿ.ಮೀ. ವ್ಯಾಪ್ತಿಗೆ ಕನಿಷ್ಠ ದರ 35 ರೂ. (ಗರಿಷ್ಠ ಮೂವರು ಪ್ರಯಾಣಿಕರು), ಅನಂತರ ಪ್ರತೀ ಕಿ.ಮೀ.ಗೆ 17 ರೂ. ನಿಗದಿಪಡಿಸಲಾಗಿದ್ದು, ಕಾಯುವಿಕೆ ಮೊದಲ 15 ನಿಮಿಷ ಉಚಿತ. ನಂತರದ 15 ನಿಮಿಷದವರೆಗೆ 5 ರೂ. ಇರಲಿದೆ.
ಪ್ರಯಾಣಿಕರ ಲಗೇಜ್ ಜೊತೆಗೆ ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜತೆಗಿರಬೇಕು. ಮೊದಲ 20 ಕಿ.ಗ್ರಾಂ.ಗಳಿಗೆ ಉಚಿತ ಮತ್ತು ಬಳಿಕ ಪ್ರತೀ 20 ಕಿಲೋ ವರೆಗೆ 5 ರೂ. ಹೆಚ್ಚುವರಿ ನೀಡಬೇಕಾಗಿದ್ದು, ರಾತ್ರಿ 10 ರಿಂದ ಬೆಳಗ್ಗೆ 5ರ ವರೆಗೆ ಮಾತ್ರ ಈ ದರದ ಒಂದೂವರೆ ಪಟ್ಟು ಪಡೆಯಲು ಅವಕಾಶ ಇದೆ.
ಆಟೋಗಳಿಗೆ ಕಲರ್ ಕೋಡಿಂಗ್ ಅಳವಡಿಸಲು ನಿರ್ಧರಿಸಲಾಗಿದ್ದು, ವಲಯ-1 (ಮಂಗಳೂರು ನಗರ)ರಲ್ಲಿ ಎಲ್ಲ ವಿಧದ ರಿಕ್ಷಾಗಳು, ಇ-ಆಟೋ ರಿಕ್ಷಾಗಳು ಒಳಗೊಂಡಂತೆ ಕಪ್ಪು ಹಾಗೂ ಹಳದಿ ಬಣ್ಣ ಬಳಿಯಲು ಈಗಾಗಲೇ ನಿಗದಿಪಡಿಸಲಾಗಿದ್ದು, ಜತೆಗೆ ಪೊಲೀಸ್ ಇಲಾಖೆಯಿಂದ ನೋಂದಾಯಿಸಿ ನೀಡಲ್ಪಟ್ಟ ಸ್ಟಿಕ್ಕರ್ ಅನ್ನು ನಾಲ್ಕೂ ಬದಿಗಳಲ್ಲಿ ಕಡ್ಡಾಯವಾಗಿ ಎದ್ದು ಕಾಣುವಂತೆ ಅಳವಡಿಸಬೇಕು.
ಇನ್ನು ವಲಯ-2 (ಮಂಗಳೂರು ಗ್ರಾಮಾಂತರ) ವಾಹನಗಳಿಗೆ ಈಗಾಗಲೇ ಕಪ್ಪು ಮತ್ತು ಹಳದಿ ಬಣ್ಣಗಳಿದ್ದು, ಪೊಲೀಸ್ ಇಲಾಖೆಯಿಂದ ನೀಡಲ್ಪಟ್ಟ ವಲಯ-2 ಎಂಬ ಸ್ಟಿಕ್ಕರನ್ನು ನಾಲ್ಕೂ ಬದಿಗಳಲ್ಲಿ ಕಡ್ಡಾಯವಾಗಿ ಎದ್ದು ಕಾಣುವಂತೆ ಅಳವಡಿಸಬೇಕು.
Follow us on Social media