ಬೆಂಗಳೂರು: ಗುತ್ತಿಗೆ ವೈದ್ಯರ ಸಿಬ್ಬಂದಿ ಖಾಯಂ ಮಾಡಲು ಮತ್ತು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಗುತ್ತಿಗೆ ವೈದ್ಯರಿಗೆ ಸರ್ಕಾರ 45 ಸಾವಿರ ಇದ್ದ ವೇತನ 60 ಸಾವಿರಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮತ್ತೆ ಹುದ್ದೆ ಖಾಯಮಾತಿಗೆ ಒತ್ತಾಯಿಸಿ ಮುಷ್ಕರ ಮಾಡುತ್ತಿದ್ದಾರೆ. ಈ ಹಿಂದೆ ತಾವು ಆರೋಗ್ಯ ಸಚಿವರಾಗಿದ್ದಾಗ 1944 ಗುತ್ತಿಗೆ ವೈದ್ಯರನ್ನು ಖಾಯಂ ಮಾಡಿದ್ದೆ. ಇದೀಗ 600 ಗುತ್ತಿಗೆ ವೈದ್ಯರನ್ನೂ ಖಾಯಂ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ. ಇಂದು ವಿಧಾನ ಸೌಧದಲ್ಲಿ ಸಂಜೆ ಗುತ್ತಿಗೆ ವೈದ್ಯರ ಜೊತೆ ಸಭೆ ನಿಗದಿಯಾಗಿದ್ದು, ಸಭೆ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉತ್ತಮವಾಗಿ ಕೊರೋನಾ ವಾರಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆಶಾ ಕಾರ್ಯಕರ್ತೆಯರು ತಮ್ಮ ಮುಷ್ಕರ ಕೈಬಿಡಬೇಕು. ನಿಮ್ಮ ಸಮಸ್ಯೆ ಬಗ್ಗೆ ಮುಖ್ಯಂತ್ರಿಗಳ ಜೊತೆ ಚರ್ಚಿಸುತ್ತೇನೆ ಎಂದು ಆರೋಗ್ಯ ಸಚಿವರು ಭರವಸೆ ನೀಡಿದರು.
ಮನೆಮನೆಗೆ ತೆರಳಿ ಐಎಲ್ಐ ಪರೀಕ್ಷೆ, ಕೊರೋನಾ ಸಾಮರ್ಥ್ಯ ಹೆಚ್ಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಂಟೈನ್ಮೆಂಟ್ ಝೊನ್ ನಲ್ಲಿ ಹೆಚ್ಚು ಪರೀಕ್ಷೆ ನಡೆಸಲು ಕೇಂದ್ರ ತಂಡ ಸಲಹೆ ನೀಡಿದೆ. ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ತಂಡ ಪ್ರಶಂಸೆ ವ್ಯಕ್ತಪಡಿಸಿದೆ. ಈ ತಂಡದವರು ಕಂಟೈನ್‌ಮೆಂಟ್ ಜೋನ್‌ಗಳಿಗೆ ಹೋಗಿ ಪರಿಶೀಲನೆ ಮಾಡಲಿದ್ದಾರೆ. ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಲಿದ್ದಾರೆ. ಆ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿ ಜೊತೆ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಸೋಂಕು ಇದುವರೆಗೂ ಸಮುದಾಯ ಹಂತಕ್ಕೆ ಹರಡಿಲ್ಲ. ನಾವು ಇನ್ನು ಒಂದು ಹಾಗೂ ಎರಡನೇ ಹಂತದಲ್ಲಿದ್ದೇವೆ. ಮೂರನೇ ಹಂತಕ್ಕೆ ಇನ್ನೂ ಸೋಂಕು ಹೋಗಿಲ್ಲ. ಈ ಬಗ್ಗೆ ಅಧಿಕಾರಿಗಳ ತಂಡದ ಗಮನಕ್ಕೆ ತಂದಿದ್ದೇವೆ ಎಂದು ಶ್ರೀರಾಮುಲು ಹೇಳಿದರು.
ಖಾಸಗಿ ಲ್ಯಾಬ್ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗಾಗಿ 4500 ರೂ. ಗರಿಷ್ಠ ದರವನ್ನು ನಿಗದಿ ಮಾಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸಿದ ಖಾಸಗಿ ಆಸ್ಪತ್ರೆಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ನಿಯಮವನ್ನು ಉಲ್ಲಂಘಿಸುವ ಖಾಸಗಿ ಆಸ್ಪತ್ರೆ ಹಾಗು ಲ್ಯಾಬ್ ಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
Follow us on Social media