Breaking News

6 ರಿಂದ 8ನೇ ತರಗತಿ ಆರಂಭ ಫೆಬ್ರವರಿ 22 ರಿಂದ; ಜುಲೈ 15 ರಿಂದ 2021-22 ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭ!

ಬೆಂಗಳೂರು:  ಜುಲೈ 15 ರಿಂದ 2021-22 ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಫೆಬ್ರವರಿ 22 ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಆರೋಗ್ಯ ಇಲಾಖೆಯ ಪ್ರಮುಖರ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪೂರ್ಣ ಪ್ರಮಾಣದ ಶಾಲೆ ತೆರೆಯುವ ಸಂಬಂಧ ಇಂದು ಐದನೇ ಬಾರಿಗೆ ಆರೋಗ್ಯ,ಶಿಕ್ಷಣ ಇಲಾಖೆಗಳ ಜೊತೆ ಸಭೆ ನಡೆಸಿದ್ದೇವೆ. ಜುಲೈ 15 ರಿಂದ 2021-22 ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದರು. 

ರಾಜ್ಯದ ಹಲವು ಭಾಗಗಳಲ್ಲಿ ಈ ತಿಂಗಳ 22 ರಿಂದ 6 ರಿಂದ 8ನೇ ತರಗತಿಯವರೆಗೆ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗಗಳಲ್ಲಿ 6 ಮತ್ತು 7ನೇ ತರಗತಿಗಳನ್ನು ಆರಂಭಿಸುತ್ತಿಲ್ಲ. 8ನೇ ತರಗತಿಗಳು ಮಾತ್ರ ಪ್ರಾರಂಭವಾಗಲಿವೆ. ಬೆಂಗಳೂರು ಮತ್ತು ಕೇರಳ ಗಡಿ ಭಾಗದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಇರುವ ಕುರಿತು ಅವಲೋಕನ ನಡೆಯುತ್ತಿದ್ದು, ಈ ತಿಂಗಳ 24 ಹಾಗೂ 25ರಂದು ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. 

1 ರಿಂದ 5ನೇ ತರಗತಿಗಳನ್ನು ಆರಂಭಿಸುವ ಬಗ್ಗೆಯೂ ಇದೇ ಸಂದರ್ಭದಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಹಲವು ರಾಜ್ಯಗಳಲ್ಲಿ ಈಗಾಗಲೇ ಶಾಲೆಗಳನ್ನು ಆರಂಭಿಸಿದ್ದು, ರಾಜ್ಯದಲ್ಲೂ ಭೌತಿಕ ತರಗತಿಗಳನ್ನು ನಡೆಸಲು ಆದ್ಯತೆ ನೀಡಲಾಗುತ್ತಿದೆ ಎಂದರು.

ಉಳಿದಂತೆ ಇದೇ 22ರಿಂದ ರಾಜ್ಯದ ಉಳಿದ ಭಾಗಗಳಲ್ಲಿ 6,7 ಮತ್ತು 8ನೇ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಶಾಲೆಗೆ ವಿದ್ಯಾರ್ಥಿಗಳು ಬರುವುದು ಕಡ್ಡಾಯವಲ್ಲ. ಆನ್ ಲೈನ್ ಮೂಲಕವೂ ಶಿಕ್ಷಣ ಮುಂದುವರಿಸಬಹುದು ಎಂದರು.

ಕಳೆದ ನವೆಂಬರ್ ನಲ್ಲಿ ಸಭೆ ನಡೆಸಿದ್ದಾಗ ಡಿಸೆಂಬರ್ ಚಳಿ ಹೆಚ್ಚಿರುವ ಕಾರಣ ಆಗ ಶಾಲೆ ಪ್ರಾರಂಭ ಬೇಡ ಎಂಬ ಸಲಹೆ ಕೇಳಿ ಬಂದಿತ್ತು. ಬಳಿಕ ಡಿಸೆಂಬರ್ ನಲ್ಲಿ ಮತ್ತೊಂದು ಸಭೆ ನಡೆಸಿ, ಜನವರಿಯಿಂದ ಅರ್ಧ ದಿನ ಶಾಲೆ ತೆರೆದಿದ್ದೆವು. ಫೆಬ್ರವರಿ 1 ರಿಂದ 9 ರಿಂದ ಪ್ರಥಮ ಪಿಯುಸಿ ವರೆಗಿನ ತರಗತಿ ಆರಂಭಿಸಿದ್ದೇವೆ. ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಹೇಳಿದರು. 

ಶಾಲೆಗೆ ಬರುವವರು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕೆಂದು ತಿಳಿಸಿದ್ದೇವು. 6 ರಿಂದ 8ರವರೆಗೆ ವಿದ್ಯಾಗಮ ಆರಂಭಿಸಿದ್ದೆವು. ಈಗ 1 ರಿಂದ ಎಲ್ಲಾ ತರಗತಿಗಳನ್ನು ಆರಂಭಿಸಿ ಎಂದು ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಒತ್ತಡ ಹೇರಿದ್ದಾರೆ. ಶಾಲೆ ಆರಂಭಿಸುವ ಕುರಿತು ಆಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಕರ್ನಾಟಕ, ಉತ್ತರಖಂಡ್, ಚತ್ತೀಸ್ ಘಡ, ಮಹಾರಾಷ್ಟದಲ್ಲಿ ಸರ್ವೆ ನಡೆಸಿದ್ದು, ಶೇ.90 ರಷ್ಟು ಮಕ್ಕಳು ಗಣಿತ ಮರೆತಿದ್ದು, ಶೇ.80 ರಷ್ಟು ಮಕ್ಕಳು ಅಕ್ಷರವನ್ನೇ ಮರೆತಿದ್ದಾರೆ ಎಂದು ವರದಿ ನೀಡಿದೆ ಎಂದರು.

ಈ ಸಂಬಂಧ ಸಿಬಿಎಸ್ಸಿಯವರು ಏಪ್ರಿಲ್ 1 ರಿಂದ ಪೂರ್ಣ ಶಾಲೆ ಆರಂಭಿಸಿ ಎಂದು ಸುತ್ತೋಲೆ ಹೊರಡಿಸಿದ್ದಾರೆ. ಹೀಗಾಗಿ ಇಂದು ತಾಂತ್ರಿಕ ತಜ್ಙರ ಸಮಿತಿ ರಚಿಸಿ ವಿವಿಧ ರಾಜ್ಯಗಳ ಶೈಕ್ಷಣಿಕ ಚಟುವಟಿಕೆ ಬಗ್ಗೆ ಚರ್ಚೆ ನಡೆಸಿದ್ದೇವೆ. ದೆಹಲಿಯಲ್ಲಿ 9 ರಿಂದ 10 ತರಗತಿಗಳು ತೆರೆದಿವೆ. ಕೇರಳದಲ್ಲಿ 10 ರಿಂದ ಮೇಲ್ಪಟ್ಟ ಶಾಲೆಗಳು ತೆರೆದಿವೆ. ಹರಿಯಾಣದಲ್ಲಿ 6 ನೇ ತರಗತಿಯಿಂದಲೇ ಶಾಲೆಗಳು ಆರಂಭಿಸಿವೆ. ಇನ್ನು ಪಂಜಾಬ್ ನಲ್ಲಿ 1 ತರಗತಿಯಿಂದ ಪಾಠ ನಡೆದಿವೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.

ಕೇರಳದಲ್ಲಿ ಮತ್ತೊಮ್ಮೆ ಸೋಂಕು ಹರಡುತ್ತಿದೆ. ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ಸೋಂಕು ಕಂಡು ಬಂದಿದೆ. ಬೆಂಗಳೂರಿನ ಎರಡು ಅಪಾರ್ಟ್ ಮೆಂಟ್ ನಲ್ಲೂ ಸೋಂಕು ವ್ಯಾಪಿಸಿದೆ. ಬೆಂಗಳೂರು ನಗರ, ಕೇರಳದ ಗಡಿ ಭಾಗದಲ್ಲಿ ಸ್ವಲ್ಪ ನಿಧಾನವಾಗಿ ಶಾಲೆ ಆರಂಭಿಸುತ್ತೇವೆ. ಈ ಭಾಗದಲ್ಲಿ 8 ನೇ ತರಗತಿ ಪ್ರಾರಂಭಿಸುತ್ತೇವೆ. 6 ಮತ್ತು 7 ನೇ ತರಗತಿ ನಡೆಸುವುದಿಲ್ಲ. ಕೇರಳದಿಂದ ಬರುವವರು ಕೋವಿಡ್ ಟೆಸ್ಟ್ ಗೆ ಒಳಗಾಗಬೇಕು. ಶಿಕ್ಷಕರು ಕೋವಿಡ್ ಟೆಸ್ಟ್ ಮಾಡಿಸಬೇಕು.

ಮಕ್ಕಳು ಶಿಕ್ಷಕರು ಒಟ್ಟಾಗಿ ಪರೀಕ್ಷೆ ಮಾಡಿಸಬೇಕು. ಶಾಲೆಗಳಲ್ಲೂ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಶಾಲೆಗಳ ಕೊಠಡಿ ಲಭ್ಯತೆ, ವಿದ್ಯಾರ್ಥಿ ಸಂಖ್ಯೆ ಆಧರಿಸಿ ಕ್ರಮ ಕೈಗೊಂಡು ಶಾಲೆ ಪ್ರಾರಂಭಕ್ಕೆ ಅವಕಾಶ ನೀಡಲಾಗುವುದು. ಮಕ್ಕಳ ಹಾಜರಾತಿ ಕಡ್ಡಾಯವಿಲ್ಲ ಎಂದರು.

ಸಮಾಜಕಲ್ಯಾಣ, ಒಬಿಸಿ ಹಾಸ್ಟೆಲ್ ನಲ್ಲಿಯೂ ಶಾಲೆಗಳನ್ನು ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತದೆ. ಮಕ್ಕಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸಾರಿಗೆ ಇಲಾಖೆ ವಿವಿಧ ನಿಗಮಗಳಿಂದ ಹೆಚ್ಚು ಟ್ರಿಪ್ ಓಡಿಸಬೇಕೆಂಬ ಬಗ್ಗೆ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದೇನೆ. ಈ ಬಗ್ಗೆ ನಾಳೆ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಫೆಬ್ರವರಿ 24, 25 ರಂದು ಮತ್ತೊಂದು ಸಭೆ ನಡೆಸಿ 1 ರಿಂದ 5 ರವರೆಗೆ ವಿದ್ಯಾಗಮ ಬಗ್ಗೆ ತೀರ್ಮಾನಿಸುತ್ತೇವೆ. ಭಾನುವಾರ ಎರಡು ಸರ್ವೆ ವರದಿ ಬರಲಿದ್ದು, ವರದಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×