ಬೆಂಗಳೂರು: ರಾಜ್ಯದಲ್ಲಿ ಕೇವಲ 4 ದಿನಗಳಲ್ಲಿ ಅಂದರೆ, ಜುಲೈ.18 ರಿಂದ ಜುಲೈ.21ರವರೆಗೂ ಬರೋಬ್ಬರಿ 11,417 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 71,000ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ನಿನ್ನೆ ಒಂದೇ ದಿನ ಬರೋಬ್ಬರಿ 3,649 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 71,069ಕ್ಕೆ ಏರಿಕೆಯಾಗಿದೆ.
ಈ ನಡುವೆ ಸೋಂಕಿನಿಂದ ಗುಣಮುಖರಾಗಿರುವವರ ಸಂಖ್ಯೆ ಕೂಡ 25 ಸಾವಿರ ಗಡಿ ದಾಟಿದ್ದು, ಈ ವರೆಗೂ 25,549 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು ನಿನ್ನೆ ಒಂದೇ ದಿನ 61 ಮಂದಿ ಬಲಿಯಾಗಿದ್ದು, ಸಾವಿನ ಸಂಖಅಯೆ ಕೂಡ 1,464ಕ್ಕೆ ತಲುಪಿದೆ.
ಬೆಂಗಳೂರು ನಗರ ಒಂದರಲ್ಲಿಯೇ ನಿನ್ನೆ 1715 ಮಂದಿಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 24 ಜನರು ಸಾವನ್ನಪ್ಪಿದ್ದಾರೆ. ಇನ್ನು ಸೋಂಕಿನಿಂದ ಗುಣಮುಖರಾಗಿ 540 ಮಂದಿ ಆಸ್ಪತ್ರೆಗಳಿಂಗ ಬಿಡುಗಡೆಯಾಗಿದ್ದಾರೆ.
ಮಂಗಳವಾರ ಒಂದೇ ದಿನ 50,000 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ 43,094 ಮಂದಿಯ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 35,780 ಮಂದಿ ಸೋಂಕು ಪತ್ತೆಯಾಗಿಲ್ಲ. ಇನ್ನು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಗಳ ಸಂಖ್ಯೆ ಕೂಡ 19,328ಕ್ಕೆ ಏರಿಕೆಯಾಗಿದೆ. ಬೆಂಗಳೂರು ಬಳಿಕ ಅತೀ ಹೆಚ್ಚು ಸೋಂಕುಳ್ಳ ಪ್ರದೇಶಗಳಲ್ಲಿ ಬೆಳಗಾವಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಬಳ್ಳಾರಿಯಲ್ಲಿ ನಿನ್ನೆ 193, ದಕ್ಷಿಣ ಕನ್ನಡ 149, ಮೈಸೂರು 135 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ.
ಈ ನಡುವೆ ಹೇಳಿಕೆ ನೀಡಿರುವ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು, ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 9,797ಕ್ಕೆ ಏರಿಕೆಯಾಗಿದ್ದು, ಕಳೆದ 509 ಹೊಸ ಪ್ರಕರಣಗಳು ಪತ್ತೆಯಾಗಿವೆ. ವಾರ್ಡ್ ನಂ.32ರಲ್ಲಿಯೇ 35 ಪ್ರಕರಣಗಳು ದಾಖಲಾಗಿವೆ. ಶಾಂತಲ ನಗರದಲ್ಲಿ 64, ಪಟ್ಟಾಭಿರಾಮನಗರ 30, ಕುಮಾರಸ್ವಾಮಿ ಲೇ ಔಟ್ 22, ಜಕ್ಕೂರು 21, ಕೋರಮಂಗಲ 20, ಶಾಂತಿನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಚಿಕ್ಕಲಸಂದ್ರ, ಮತ್ತು ಕೆಂಪೇಗೌಡ ವಾರ್ಡ್ ಗಳಲ್ಲಿ 14 ಪ್ರಕರಣಗಳು ಪತ್ತೆಯಾಗಿವೆ. ಸತ್ತುಗುಂಟೆಪಾಳ್ಯ, ಹೊಂಬೆಗೌಡ ನಗರ, ಸಂಜಯ್ ನಗರ, ಜೀವನ್ ಭೀಮ ನಗರ ಮತ್ತು ಕಾಡುಗೋಡಿಯಲ್ಲಿ 13 ಪ್ರಕರಣಗಳು ಪತ್ತೆಯಾಗಿವೆ. ಹೊಯ್ಸಳ ನಗರ, ಮಡಿವಾಳ, ಜಯನಗರ ಮತ್ತು ಅತ್ತೂರಿನಲ್ಲಿ ತಲಾ 12 ಪ್ರಕರಣಗಳು ಪತ್ತೆಯಾಗಿದ್ದು, ಹೊಂಗಸಂದ್ರ, ಅಂಜನಾಪುರ, ಮನೋರಾಯನಪಾಳ್ಯ, ಬಾಣಸವಾಡಿ, ಪುಲಕೇಶಿನಗರ, ಬೇಗೂರು, ಬಿಳೇಕಹಳ್ಳಿ ಮತ್ತು ವಿಶ್ವನಾಥನಾಗೇನಹಳ್ಳಿಯಲ್ಲಿ ತಲಾ 11 ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
Follow us on Social media