ಲಕ್ನೋ : ತನ್ನ ಸಿಮ್ ಕಾರ್ಡ್ ಅನ್ನು 3ಜಿ ಯಿಂದ 4ಜಿಗೆ ಅಪ್ಡೇಟ್ ಮಾಡಲು ಹೋಗಿ ಮಹಿಳೆಯೋರ್ವರು 9.5 ಲಕ್ಷ ಹಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹಣ ಕಳೆದುಕೊಂಡಿರುವ ಮಹಿಳೆಯನ್ನು ನೋಯ್ಡಾ ಮೂಲದ ವರ್ಷಾ ಅಗರ್ವಾಲ್ ಎನ್ನಲಾಗಿದೆ. ನಕಲಿ ಗ್ರಾಹಕ ಸೇವಾ ಕಾರ್ಯನಿರ್ವಾಹಕ ಸಿಮ್ ಕಾರ್ಡ್ ಅಪ್ಡೇಟ್ ಮಾಡುವ ನೆಪದಲ್ಲಿ 9.5 ಲಕ್ಷ ರೂ. ಹಣವನ್ನು ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವರ್ಷಾಗೆ ಮೇ 7ರಂದು ಕರೆಬಂದಿದ್ದು, ಈ ಸಂದರ್ಭ ಮೊಬೈಲ್ ನೆಟ್ವರ್ಕ್ ಕಂಪೆನಿಯ ಗ್ರಾಹಕ ಸೇವಾ ವಿಭಾಗದಿಂದ ಎಂದು ಹೇಳಿ ಮಾತನಾಡಿದ್ದಾನೆ. ನಂತರ ಆತ ವರ್ಷಾಗೆ ಶೀಘ್ರದಲ್ಲೇ ನಿಮ್ಮ 3ಜಿ ಸಿಮ್ ಕಾರ್ಡ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಒಂದು ವೇಳೆ ತಮ್ಮ ಸಿಮ್ ಕಾರ್ಡ್ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ನೀವು ಬಯಸಿದ್ದಲ್ಲಿ 3ಜಿಯಿಂದ 4ಜಿಗೆ ಅಪ್ಟೇಡ್ ಮಾಡಬೇಕು ಎಂದು ತಿಳಿಸಿದ್ದಾನೆ.
ಆದರೆ ಫೋನ್ ಮಾಡಿದಾತನ ಉದ್ದೇಶವನ್ನು ತಿಳಿಯದಿದ್ದ ಆಕೆ ತನ್ನ ಸಿಮ್ ಅನ್ನು ಅಪ್ಡೇಟ್ ಮಾಡಲು ಹೇಳಿದ್ದಾಳೆ. ಆದರೆ, ಸಿಮ್ ಸ್ವಾಪ್ ಮೂಲಕ ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ.
ಸಿಮ್ ಕಾರ್ಡ್ ಅಪ್ಡೇಟ್ ಪ್ರಕ್ರಿಯೆ ಆರಂಭವಾದ ಬಳಿಕ 72 ಗಂಟೆಗಳ ಕಾಲ ನಿಮ್ಮ ಸಿಮ್ಕಾರ್ಡ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಕರೆ ಮಾಡಿದ ವಂಚಕ ಹೇಳಿದ್ದಾನೆ. ಆದರೆ, ಆರು ದಿನಗಳ ಬಳಿಕವೂ ವರ್ಷಾ ಅವರ ಸಿಮ್ಕಾರ್ಡ್ ಅಪ್ಡೇಟ್ ಆಗದೇ ಇದ್ದ ಸಂದರ್ಭ ಅವರಿಗೆ ಅನುಮಾನ ಮೂಡಿದ್ದು, ತಕ್ಷಣವೇ ವರ್ಷಾ ಬ್ಯಾಂಕ್ಗೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಆ ಸಂದರ್ಭ ಅವರ ಉಳಿತಾಯ ಖಾತೆಯಲ್ಲಿ ಮೇ 8 ಹಾಗೂ 11 ರ ನಡುವೆ 22 ವ್ಯವಹಾರ ನಡೆದಿದ್ದು, ಒಟ್ಟು 9.52 ಲಕ್ಷ ರೂಗಳನ್ನು ಜಾರ್ಖಂಡ್ನಿಂದ ಬೇರೆ ಖಾತೆಗೆ ವರ್ಗಾಯಿಸಲಾಗಿದೆ.
ಶೀಘ್ರದಲ್ಲೇ ನಾವು ಆರೋಪಿಗಳನ್ನು ಬಂಧಿಸುತ್ತೇವೆ. ಈ ಬಗ್ಗೆ ಸೈಬರ್ ಸೆಲ್ ಐಟಿ ಕಾಯ್ದೆಯಡಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ನೋಯ್ಡಾದ ಸೈಬರ್ ಸೆಲ್ನ ಉಸ್ತುವಾರಿ ಬಲ್ಜೀತ್ ಸಿಂಗ್ ತಿಳಿಸಿದ್ದಾರೆ.
ಸಿಮ್ ಸ್ವಾಪ್ ಮಾಡುವ ಮೂಲಕ ಸೈಬರ್ ವಂಚಕರು ಹಣ ಕಬಳಿಸುತ್ತಾರೆ. ಗ್ರಾಹಕರಿಗೆ ಹೆಸರಾಂತ ಕಂಪೆನಿಗಳ ಮೂಲಕ ಕರೆ ಮಾಡಿ ಕ್ಷಣಾರ್ಧದಲ್ಲಿ ನಮ್ಮ ಸಿಮ್ನ ಮಾಹಿತಿಯನ್ನು ತಮ್ಮ ಸರ್ವರ್ಗಳಲ್ಲಿ ಸೇವ್ ಮಾಡಿಕೊಳ್ಳುತ್ತಾರೆ. ಬಳಿಕ ಗ್ರಾಹಕರು ಸಿಮ್ಕಾರ್ಡ್ಗಳನ್ನು ಹ್ಯಾಕ್ ಮಾಡಿ ಹಣದೋಚುವ ಹಾಗೂ ಕಾನೂನು ಬಾಹಿರವಾದ ಕೃತ್ಯಕ್ಕೆ ಉಪಯೋಗಿಸುತ್ತಾರೆ.
Follow us on Social media